-->
ನಿಜವಾದ ಮಾನವ ಬಾಲ ಹೊಂದಿದ್ದ ಮಗುವಿನ ಜನನ: ಎಲ್ಲರನ್ನೂ ಬೆರಗುಗೊಳಿಸಿದ ಅಪೂರ್ವ ಪ್ರಕರಣ

ನಿಜವಾದ ಮಾನವ ಬಾಲ ಹೊಂದಿದ್ದ ಮಗುವಿನ ಜನನ: ಎಲ್ಲರನ್ನೂ ಬೆರಗುಗೊಳಿಸಿದ ಅಪೂರ್ವ ಪ್ರಕರಣ

ಬ್ರಾಸಿಲಿಯ: ಕೆಲವೊಮ್ಮೆ ಹಿರಿಯರು ಮಕ್ಕಳ ಪೋಕ್ರಿತನಕ್ಕೆ ಪ್ರೀತಿಯಿಂದ ಗದರಿಸುತ್ತಾ ‘ಇವನು ಪಕ್ಕಾ​ ಮಂಗನೇ, ಬಾಲ ಒಂದಿಲ್ಲ’ ಎನ್ನುವುದುಂಟು. ಇದೀಗ ಮಗುವೊಂದು ಬಾಲ ಸಹಿತ ಹುಟ್ಟಿ ಎಲ್ಲರನ್ನು ಬೆರಗುಗೊಳಿಸಿದೆ.

ಬ್ರೆಜಿಲ್​ನ ಫೋರ್ಟಲೇಜಾ ನಗರದ ಅಲ್ಪರ್ಟ್​ ಸಬಿನ್ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿರುವ ಗಂಡು ಮಗುವಿಗೆ ಪ್ರಾಣಿಗಳಿಗಿರುವಂತೆಯೇ 12 ಸೆಂಟಿ ಮೀಟರ್​ ಉದ್ದದ ಬಾಲ ಇತ್ತು ಎನ್ನಲಾಗಿದೆ. ಈ ವಿಚಾರವನ್ನು 
ಜರ್ನಲ್​ ಆಫ್​ ಪೀಡಿಯಾರ್ಟಿಕ್​ ಸರ್ಜರಿ ಕೇಸ್ ರಿಪೋರ್ಟ್ಸ್​​ ವರದಿ ಮಾಡಿದೆ. ಮಗುವಿನ ಚಿತ್ರಗಳನ್ನು ಪ್ರಕಟಿಸಿರುವ ಜರ್ನಲ್​​ನಲ್ಲಿ, ವೈದ್ಯರು ಆ ಬಾಲವನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. 

ತಾಯಿಯ ಗರ್ಭದಲ್ಲಿರುವಾಗ ಮಾನವ ಶಿಶುಗಳಲ್ಲಿ 4ರಿಂದ 8ನೇ ವಾರದ ಜೆಸ್ಟೇಷನ್​​ ಸಮಯದಲ್ಲಿ ಒಂದು ಎಂಬ್ರಿಯಾನಿಕ್​ ಬಾಲ ಬೆಳೆಯುವುದು ಸಹಜ. ಆದರೆ ಅದು ಕ್ರಮೇಣ ದೇಹದೊಳಗಡೆ ಸೇರಿಕೊಂಡು ಟೇಲ್​ಬೋನ್​ಗೆ ದಾರಿಮಾಡುತ್ತದೆ. ಆದರೆ, ಬ್ರೆಜಿಲ್​ನ ಈ ಮಗುವಿನ ವಿಚಾರದಲ್ಲಿ ಆ ಬಾಲ ಬೆಳೆಯುವುದು ಮುಂದುವರೆದಿತ್ತು. ವಿಚಿತ್ರವೆಂದರೆ ಹುಟ್ಟುವವರೆಗೂ ಅದು ಯಾವುದೇ ಸ್ಕ್ಯಾನಿಂಗ್ ರಿಪೋರ್ಟ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎನ್ನಲಾಗಿದೆ.

ಸಣ್ಣಗೆ 12 ಸೆಂ.ಮೀ. ಉದ್ದವಿದ್ದ ಈ ಬಾಲದ ತುದಿಯಲ್ಲಿ 4 ಸೆಂ.ಮೀ. ಡಯಾಮೀಟರ್​ನ ಮಾಂಸದ ಚೆಂಡು ಕೂಡ ಇತ್ತು. ಅದರ ಪರಿಶೀಲನೆ ನಡೆಸಿದಾಗ ಯಾವುದೇ ಕಾರ್ಟಿಲೇಜ್​ ಅಥವಾ ಬೋನ್​ ಇರಲಿಲ್ಲ. ಆದ್ದರಿಂದ ಇದು ‘ನಿಜವಾದ ಮಾನವ ಬಾಲ’ದ ಉದಾಹರಣೆ ಎಂಬ ನಿರ್ಣಯಕ್ಕೆ ಬರಲಾಯಿತು ಎಂದು ಜರ್ನಲ್​ನಲ್ಲಿ ವಿವರಿಸಲಾಗಿದೆ. 

ಪ್ರಪಂಚದಾದ್ಯಂತ ನಿಜವಾದ ಬಾಲಗಳೊಂದಿಗೆ ಜನಿಸಿರುವ ಮಕ್ಕಳ 40 ದಾಖಲಿತ ಪ್ರಕರಣಗಳು ಮಾತ್ರ ಈವರೆಗೆ ಲಭ್ಯವಾಗಿದೆ. ಇದು ಜಗತ್ತಿನಲ್ಲಿಯೇ ಅತ್ಯಂತ ವಿರಳವೆನಿಸಿರುವ ಪ್ರಕರಣವಾಗಿದೆ.

Ads on article

Advertise in articles 1

advertising articles 2

Advertise under the article