
'ಫಸ್ಟ್ನೈಟ್ ನಲ್ಲಿ ಎಲ್ಲರೂ ಏನು ಮಾಡುತ್ತಾರೋ, ಅದ್ನೇ ನಾವೂ ಮಾಡಿದ್ದೀವೆ: ಲವ್ ಯೂ ರಚ್ಚು ಸಿನಿಮಾ ದೃಶ್ಯಕ್ಕೆ ಡಿಂಪಲ್ ಬೆಡಗಿ ಸಮಜಾಯಿಷಿ
Friday, November 12, 2021
ಬೆಂಗಳೂರು: 'ಐ ಲವ್ ಯೂ' ಸಿನಿಮಾದಲ್ಲಿ ನಟಿಸಿ ಹಾಡೊಂದರ ಕಾರಣಕ್ಕೆ ಗಮನ ಸೆಳೆದಿದ್ದ ನಟಿ ರಚಿತಾ ರಾಮ್ ಇದೀಗ ‘ಲವ್ ಯೂ ರಚ್ಚು’ ಸಿನಿಮಾದಲ್ಲೂ ಅಂಥದ್ದೇ ಕಾರಣಕ್ಕೆ ಗಮನ ಸೆಳೆದು ಮಾತಿಗೆ ಆಹಾರವಾಗಿದ್ದಾರೆ. ಅಷ್ಟಕ್ಕೂ ಹಾಗಾಗಲಿಕ್ಕೆ ಕಾರಣ ಮತ್ತಂಥದ್ದೇ ದೃಶ್ಯ ಹಾಗೂ ರಚಿತಾ ಮಾತು.
ಗುರು ದೇಶಪಾಂಡೆ ನಿರ್ಮಾಣ, ಶಂಕರ್ ಎಸ್. ರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ರಚಿತಾ ರಾಮ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ ‘ಲವ್ ಯೂ ರಚ್ಚು’ ಚಿತ್ರದ ಮುದ್ದು ನೀನೇ.. ಎಂಬ ಹಾಡು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ಅಜೇಯ್ ರಾವ್ ಜತೆ ನಗ್ನ ಬೆನ್ನು ಕಾಣಿಸುವ ರೀತಿ ಮಾದಕವಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್ ಪ್ರಶ್ನೆ ಎದುರಿಸಬೇಕಾಗಿದೆ.
‘ಐ ಲವ್ ಯೂ’ ಚಿತ್ರದ ಹಾಡೊಂದರಲ್ಲಿ ನಟ ಉಪೇಂದ್ರ ಜತೆ ಮಾದಕವಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಬಳಿಕ 'ತಾನು ಅಂಥಹ ದೃಶ್ಯಗಳಲ್ಲಿ ಕಾಣಿಸಬಾರದಿತ್ತು, ಇನ್ನು ಮುಂದೆ ಆ ರೀತಿ ನಟಿಸುವುದಿಲ್ಲ' ಎಂದು ಕಣ್ಣೀರು ಹಾಕಿ ಹೇಳಿಕೊಂಡಿದ್ದರು. ಇದೀಗ ‘ಲವ್ ಯೂ ರಚ್ಚು’ ಸಿನಿಮಾದಲ್ಲೂ ಅದೇ ರೀತಿ ಕಾಣಿಸಿಕೊಂಡಿದ್ದಾರೆ.
ಮುಂದೆ ಅಂಥಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅತ್ತಿದ್ದ ನೀವು ಮತ್ತೆ ಅಂಥದ್ದೇ ದೃಶ್ಯಗಳಲ್ಲಿ ಅಭಿನಯಿಸಿದ್ದೇಕೆ? ಎಂದು ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಅವರು ನೀಡಿರುವ ಉತ್ತರ ಈಗ ಎಲ್ಲೆಡೆ ಮತ್ತೆ ಮತ್ತೆ ಕೇಳಿ ಬರಲಾರಂಭಿಸಿದೆ. ‘ಮದ್ವೆ ಆದ್ಮೇಲೆ ಫಸ್ಟ್ನೈಟ್ ನಲ್ಲಿ ಎಲ್ಲರೂ ಏನು ಮಾಡುತ್ತಾರೋ, ಅದ್ನೇ ನಾವೂ ಮಾಡಿದ್ದೀವೆ' ಎಂದು ಸಮಜಾಯಿಷಿ ನೀಡಿದ್ದಾರೆ. ‘ಸುಮ್ಮನೆ ಮಾಡಲ್ಲ, ಮಾಡಿದ್ದೀವಿ ಅಂದ್ರೆ ಅದ್ಕೂ ಒಂದು ಕಾರಣ ಇರುತ್ತದೆ. ಜಾಸ್ತಿ ಡಿಟೇಲ್ಸ್ ಹೋಗಿಲ್ಲ, ಬೇಸಿಕ್ ಏನಿರುತ್ತದೋ ಅಷ್ಟು ಮಾಡಿದ್ದೇವೆ’ ಎಂದು ರಚಿತಾ ರಾಮ್ ತಾವು ‘ಲವ್ ಯೂ ರಚ್ಚು’ ಚಿತ್ರದಲ್ಲಿ ಅಭಿನಯಿಸಿರುವ ದೃಶ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿರುವ ಈ ಹಾಡು, ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನಾಗಾರ್ಜುನ ಶರ್ಮಾ ಅವರು ಬರೆದಿರುವ ಈ ಗೀತೆಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಸಿದ್ ಶ್ರೀರಾಮ್ ಮತ್ತು ಸುಪ್ರಿಯಾ ರಾಮ್ ಹಾಡಿದ್ದಾರೆ.