
ಪತಿಯ ಲ್ಯಾಪ್ ಟಾಪ್ ಬಳಸಿ ಮಾಡಬಾರದ ಕೃತ್ಯ ಎಸಗಿದ ಮಹಿಳೆಯ ಬಂಧನ!
Sunday, November 14, 2021
ತುಮಕೂರು: ಪತಿಯ ಲ್ಯಾಪ್ಟಾಪ್ ಬಳಸಿಕೊಂಡು ದುಡ್ಡು ಕೊಟ್ರೆ ಸ್ಪಾಟಲ್ಲೇ ಕೆಲಸ ಎಂದು ದಾಖಲೆಗಳನ್ನು ತಿರುಚಿ, ಆರ್ಟಿಒ ಇಲಾಖೆಗೆ ವಂಚನೆಗೈಯುತ್ತಿದ್ದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಸಿಂಧೂರ ಲಕ್ಷ್ಮೀ ಬಂಧಿತ ಆರೋಪಿತೆ. ಈಕೆಯ ಕೃತ್ಯ ಕಂಡು ಪೊಲೀಸರೇ ದಂಗಾಗಿದ್ದಾರೆ.
ಮಧುಗಿರಿ ಆರ್ಟಿಒ ಕಚೇರಿಯ ರಿಜಿಸ್ಟ್ರೇಶನ್ ಪಾಸ್ವರ್ಡ್ ಹೊಂದಿರುವ ಈಕೆ ಬೇಕೆಂದಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಿಕೊಟ್ಟಿದ್ದಾಳೆ. ಈ ಮೂಲಕ ಸಿಂಧೂರ ಲಕ್ಷ್ಮಿ 2019 ರಿಂದ 2020 ರವರೆಗೂ ಲಕ್ಷಾಂತರ ರೂ. ವನ್ನು ವಂಚಿಸಿದ್ದಾಳೆ.
ಹಣ ಕೊಟ್ಟರೆ ಸ್ಥಳದಲ್ಲೇ ಆರ್ಸಿ ಕಾರ್ಡ್, ಚಾರ್ಸಿ ನಂಬರ್ ಮತ್ತು ಎಫ್ಸಿ ಸರ್ಟಿಫಿಕೇಟ್ ಕೊಡುತ್ತಿದ್ದಳು. ಈ ಕೃತ್ಯಕ್ಕೆ ಆಕೆ ತನ್ನ ಪತಿಯ ಲ್ಯಾಪ್ಟಾಪ್ ಅನ್ನು ಬಳಸಿಕೊಂಡಿದ್ದಾಳೆ. ಆದ್ದರಿಂದ ಬೇಕೆಂದಾಗ ಲಾಗಿನ್ ಆಗಿ ಹಣ ನೀಡಿದವರಿಗೆ ವಾಹನ ರಿಜಿಸ್ಟ್ರೇಷನ್ ಮಾಡಿಕೊಡುತ್ತಿದ್ದಳು.
ಈ ಚಾಲಾಕಿ ಮಹಿಳೆ ಒಂದಲ್ಲ ಎರಡಲ್ಲ ಬರೋಬ್ಬರಿ 286 ದಾಖಲೆಗಳನ್ನು ತಿದ್ದಿ ಹಣವನ್ನು ನುಂಗಿ ನೀರು ಕುಡಿದಿದ್ದಾಳೆ. ಈ ಸಂಬಂಧ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಈ ಖತರ್ನಾಕ್ ಕಳ್ಳಿಯನ್ನು ಬಂಧಿಸಿದ್ದಾರೆ.
ಇದೀಗ ಆಕೆ ಬಳಿಯಿರುವ ಲ್ಯಾಪ್ಟ್ಯಾಪ್ ಹಾಗೂ ಅಕ್ರಮ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.