ಅರರೇ... ರಶ್ಮಿಕಾ ಮಂದಣ್ಣ ಮೈಬಣ್ಣಕ್ಕೇನಾಗಿದೆ ಎಂದು ಕಕ್ಕಾಬಿಕ್ಕಿಯಾದ ನೆಟ್ಟಿಗರು!
Tuesday, November 16, 2021
ಬೆಂಗಳೂರು: ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಬಾರಿ ವಿವಾದ ಇಲ್ಲದಿದ್ದರೆ ನನಗೆ ಭಯವಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದರು. ಆದ್ದರಿಂದ ಸದಾ ವಿವಾದದಲ್ಲಿಯೇ ಇರುವ ಬಯಕೆಯನ್ನು ವ್ಯಕ್ತಪಡಿಸಿರುವ ರಶ್ಮಿಕಾ ಕೈ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಂಗೈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊದಲ್ಲಿ ಅವರ ಅಂಗೈ ಮಾತ್ರ ಬಿಳಿಯಾಗಿದ್ದು, ಉಳಿದವು ಕಪ್ಪಾಗಿವೆ. ಇದೇನು ಎಂದು ತಿಳಿಯದ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ತಮ್ಮ ನೆಚ್ಚಿನ ತಾರೆಯ ಕೈಗೆ ಏನು ಆಗಿದೆಯೆಂದು ಹಲವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ ಅಭಿಮಾನಿಗಳು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಮ್ಮ ಕೈಗೆ ಏನಾಗಿದೆ ಎಂದು ಹೇಳಿದ್ದಾರೆ.
ಇದು ತೆಲುಗಿನ 'ಪುಷ್ಪ' ಸಿನಿಮಾದ ವೇಳೆ ಕ್ಲಿಕ್ಕಿಸಿಕೊಂಡಿರುವ ಫೋಟೋ. ಈ ಸಿನಿಮಾದಲ್ಲಿ ಅವರಿಗೆ ಹಳ್ಳಿ ಹುಡುಗಿ ಪಾತ್ರವಿದ್ದು, ಅವರ ಮೈಬಣ್ಣ ಕಪ್ಪು ಮಾಡಲಾಗಿದೆ. ಅಸಲಿಗೆ ಬಿಳಿ ಮೈಬಣ್ಣ ಹೊಂದಿರುವ ರಶ್ಮಿಕಾ ಈ ಸಿನಿಮಾಕ್ಕಾಗಿ ಕಪ್ಪಾಗಿದ್ದಾರೆ. ಆದರೆ ಮಧ್ಯಾಹ್ನ ಊಟದ ಬ್ರೇಕ್ನಲ್ಲಿ ಅಂಗೈ ತೊಳೆದಾಗ ಅವರ ಅಸಲಿ ಮೈಬಣ್ಣ ಗೋಚರವಾಗಿದೆ. ನಕಲಿ ಬಣ್ಣ ಅಂದ್ರೆ ಮೇಕಪ್ ಉಳಿದ ಭಾಗದಲ್ಲಿ ಕಾಣುತ್ತಿದೆ.
ಅಂದಹಾಗೆ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಅಲ್ಲು ಅರ್ಜುನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಶ್ರೀವಲ್ಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಮತ್ತು ಹಾಡು ರಿಲೀಸ್ ಆಗಿವೆ. ಡಿ.17ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ‘ಪುಷ್ಪ’ ಚಿತ್ರ ತೆರೆಕಾಣಲಿದೆ