
ಈ ಮಗು ನನ್ನದೇ ಹೊಟ್ಟೆಯಲ್ಲಿ ಹುಟ್ಟಿದೆ ನಿಜ, ಆದರೆ ಈ ಮಗು ನನ್ನದಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ!
Friday, November 12, 2021
ಲಾಸ್ ಏಂಜಲೀಸ್: ಈ ಮಗು ತನ್ನ ಹೊಟ್ಟೆಯಲ್ಲಿ ಹುಟ್ಟಿರೋದು ನಿಜ. ಆದರೆ ಈ ಮಗು ತನ್ನದಲ್ಲವೆಂದು ಮಹಿಳೆಯೊಬ್ಬರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಅಚ್ಚರಿಯ ಘಟನೆಯೊಂದು ಲಾಸ್ ಏಂಜಲೀಸ್ ನಲ್ಲಿ ನಡೆದಿದೆ.
ದಫನಾ ಹಾಗೂ ಅಲೆಕ್ಸಾಂಡರ್ ದಂಪತಿಗೆ ಅದಾಗಲೇ ಒಂದು ಮಗುವಿತ್ತು. ಆದರೆ ಅವರು ಇನ್ನೊಂದು ಮಗುವನ್ನು ಪಡೆಯಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗುವುದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯಲು ಬಯಸಿದ್ದರು.
ಪತಿಯ ವೀರ್ಯವನ್ನು ಪತ್ನಿಯ ಗರ್ಭದಲ್ಲಿ ಇರಿಸಿ ಬಳಿಕ ಮಗು ಹೊಂದುವ ತಂತ್ರಜ್ಞಾನ ಇದಾಗಿದೆ. ಅದೇ ರೀತಿ ಮಾಡಲಾಗಿತ್ತು ಕೂಡಾ. ತಂತ್ರಜ್ಞಾನ ಯಶಸ್ವಿಯಾಗಿ ಮುದ್ದಾದ ಮಗು ಹುಟ್ಟಿತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಮಗುವಿಗೆ ಮೂರು ತಿಂಗಳು ಆಗುತ್ತಿದ್ದಂತೆ ಈ ತಾಯಿಗೆ ಮಗುವೇಕೋ ತನ್ನದಲ್ಲ ಎಂದು ಅನ್ನಿಸಲು ಆರಂಭವಾಗಿದೆ. ಮಗುವಿನ ಮುಖ ಚೆಹರೆಯು ತನ್ನಂತೆ ಅಥವಾ ಪತಿಯಂತೆ ಇಲ್ಲವೆಂದು ಭಾಸವಾಗಲು ಆರಂಭವಾಗಿದೆ. ಅಷ್ಟೇ ಅಲ್ಲದೆ ತನ್ನ ಇಡೀ ಕುಟುಂಬದವರ ಮುಖ ಚಹರೆಗಿಂತ ಮಗು ಭಿನ್ನವಾಗಿರುವಂತೆ ಅನುಮಾನ ಹುಟ್ಟಿದೆ.
ಈ ಹಿನ್ನೆಲೆಯಲ್ಲಿ ದಂಪತಿ ಮಗುವಿನ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲಿ ಆಕೆ ಅಂದುಕೊಂಡಂತೆ ಆಕೆಯ ದೇಹದೊಳಗೆ ಇರಿಸಿದ್ದ ವೀರ್ಯವು ಅವರದ್ದಲ್ಲವೆಂದು ಸಾಬೀತಾಗಿದೆ. ಬಳಿಕ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ಕೊನೆಗೆ ತನಿಖೆಯಿಂದ ತಿಳಿದುಬಂದದ್ದೇನೆಂದರೆ ಒಂದೇ ಆಸ್ಪತ್ರೆಯಲ್ಲಿ ಒಟ್ಟಿಗೇ ಇಬ್ಬರು ಮಹಿಳೆಯರು ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯಲು ಬಯಸಿದ್ದರು.
ವೈದ್ಯರು ಮಾಡಿರುವ ಎಡವಟ್ಟಿನಿಂದ ಇನ್ನೊಂದು ಮಹಿಳೆಯ ಪತಿಯ ವೀರ್ಯವು ದಫನಾ ಅವರ ಗರ್ಭದಲ್ಲಿಯೂ ದಫನಾ ಅವರ ಪತಿಯ ವೀರ್ಯವು ಆ ಮಹಿಳೆಯ ಗರ್ಭದಲ್ಲಿಯೂ ಇಡಲಾಗಿದೆ. ಆದ್ದರಿಂದ ಆ ದಂಪತಿಯ ಮಗುವನ್ನು ದಫನಾ ಹೆತ್ತಿದ್ದರೆ, ಈ ದಂಪತಿಯ ಮಗುವನ್ನು ಆಕೆ ಹೆತ್ತಿದ್ದಾರೆ. ಬಳಿಕ ಆಸ್ಪತ್ರೆ ತಪ್ಪನ್ನು ಒಪ್ಪಿಕೊಂಡಿದೆ.
ಐವಿಎಫ್ ತಂತ್ರಜ್ಞಾನವು ಅದಲು ಬದಲಾಗಿರುವ ಹಿನ್ನೆಲೆಯೇ, ಈ ಪ್ರಮಾದ ನಡೆದಿರುವುದಕ್ಕೆ ಕಾರಣ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಕೊನೆಗೂ ಪ್ರಕರಣ ಸುಖಾಂತ್ಯಗೊಂಡಿದ್ದು, ಈಕೆ ಹೆತ್ತ ಮಗುವನ್ನು ಆಕೆಗೂ, ಆಕೆ ಹೆತ್ತ ಮಗುವನ್ನು ಈಕೆಗೂ ಕೊಡಲಾಯಿತು. ಕೊನೆಗೆ ಮಕ್ಕಳು ತಮ್ಮ ಸ್ವಂತ ಅಪ್ಪ-ಅಮ್ಮನನ್ನು ಸೇರಿದ್ದಾರೆ. ಇಷ್ಟು ತಿಂಗಳು ತಮ್ಮ ಜತೆಯಿದ್ದ ಕಂದಮ್ಮಗಳನ್ನು ಬೇರೆಯವರಿಗೆ (ನಿಜವಾದ ಅಮ್ಮನಿಗೆ) ಒಪ್ಪಿಸಲು ಇಬ್ಬರೂ ಅಮ್ಮಂದಿರಿಗೆ ತುಂಬಾ ಕಷ್ಟವಾಯಿತು ಎಂದು ಹೇಳಲಾಗಿದೆ.