ಕಂಗಾನಾಗೆ ಪ್ರೀತಿಯ ಹೆಸರಿನಲ್ಲಿ ಕೈಕೊಟ್ಟಿದ್ದು ಯಾರು? ಇನ್ ಸ್ಟ್ರಾಗ್ರಾಂ ಪೋಸ್ಟ್ ನಲ್ಲಿ ನಟಿ ಬರೆದ್ದೇನು
Wednesday, December 1, 2021
ಮುಂಬೈ: ನಟನೆಯ ಮೂಲಕವೂ ಎಲ್ಲರ ಗಮನ ಸೆಳೆದಿರುವ ನಟಿ ಕಂಗನಾ ಸದಾ ಒಂದಿಲ್ಲೊಂದು ಕಳೆದೊಂದು ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದು ಸಿದ್ಧಹಸ್ತರು. ಅವರು ತಮಗೆ ಅನ್ನಿಸಿದ್ದನ್ನು ಕಟುವಾಗಿ, ನೇರವಾಗಿ ಹೇಳುವ ಮೂಲಕವೇ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಲೇ ಇರುವ ಕಂಗನಾ ಇದೀಗ ಸ್ವಲ್ಪ ಭಿನ್ನ ಎನಿಸುವ ಪೋಸ್ಟ್ ಹಾಕಿದ್ದಾರೆ.
ಇತ್ತೀಚೆಗಷ್ಟೇ 1947ರಲ್ಲಿ ನಮಗೆ ಸಿಕ್ಕಿದ್ದು ಭಿಕ್ಷೆಯ ಸ್ವಾತಂತ್ರ್ಯ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದು ಹೇಳುವ ಮೂಲಕ ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದ ಕಂಗನಾ ಇದೀಗ ಪ್ರೀತಿಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದರ ಗೂಡಾರ್ಥದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.
ಯುವಕ-ಯುವತಿ ತಬ್ಬಿಕೊಂಡಿರುವ ರೇಖಾಚಿತ್ರದ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿರುವ ಕಂಗನಾ ‘ತೇರೇ ಲಿಯೇ ಹಮ್ ಹೈ ಜಿಯೇ…ಕಿತ್ನೆ ಸಿತಮ್ ಹಮ್ ಪೆ ಸನಮ್’ (ನಿನಗಾಗಿ ನಾನು ಬದುಕಿದೆ, ನನ್ನ ಮೇಲೆ ನೀನೇಕೆ ಈ ರೀತಿ ಅನ್ಯಾಯ ಮಾಡುತ್ತಿರುವೆ ಪ್ರೇಮಿಯೇ) ಎಂದು ಬರೆದುಕೊಂಡಿದ್ದಾರೆ. ಇನ್ನೊಂದರಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಶೇರ್ ಮಾಡಿರುವ ಅವರು, ನಾನು ಸಾಧಾರಣ ಹುಡುಗಿ, ನಾನು ಪ್ರೀತಿಯೆಂಬ ಸೌಂದರ್ಯವನ್ನು ನಂಬುತ್ತೇನೆ, ಇದರಿಂದ ನನಗೆ ಸುಂದರವಾದ ಪ್ರಪಂಚ ಸಿಕ್ಕಿದೆ. ಆದರೆ ಇದನ್ನು ಹೊರತುಪಡಿಸಿ ನನ್ನಲ್ಲಿ ಏನೂ ವಿಶೇಷವಿಲ್ಲ’ ಎಂದು ಬರೆದಿದ್ದಾರೆ. ಈ ಪೋಸ್ಟ್ ಕೂಡ ಒಂದು ರೀತಿಯಲ್ಲಿ ನಿಗೂಢವಾಗಿಯೇ ಇದೆ.
ಈ ಎರಡು ಪೋಸ್ಟ್‌ಗಳ ಅರ್ಥವೇನು? ನಟಿ ಕಂಗನಾಗೆ ಕೈಕೊಟ್ಟ ಪ್ರೇಮಿ ಯಾರು? ಯಾರ ಪ್ರೀತಿಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂದೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಕಂಗನಾ ಅವರ ಪ್ರೀತಿ ವಿಚಾರಕ್ಕೆ ಬಂದಲ್ಲಿ ಇದಾಗಲೇ ಹಲವು ನಟರೊಂದಿಗೆ ಕಂಗನಾ ಹೆಸರು ಥಳಕು ಹಾಕಿಕೊಂಡಿತ್ತು. ಅದರಲ್ಲಿಯೂ ಹೃತಿಕ್ ರೋಷನ್ ಹಾಗೂ ಕಂಗನಾ ನಡುವಿನ ಸಂಬಂಧ ಆ ಬಳಿಕ ಇವರಿಬ್ಬರ ಜಗಳ ದೊಡ್ಡ ಸುದ್ದಿಯನ್ನೇ ಮಾಡಿತ್ತು. ವಿವಾಹಿತರಾಗಿದ್ದರೂ ಹೃತಿಕ್ ರೋಷನ್ ತಮ್ಮನ್ನು ಪ್ರೀತಿಸಿ ಹೇಗೆ ವಂಚನೆಗೈದಿದ್ದರು ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಕಂಗನಾರೇ ಹೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಹೃತಿಕ್ ರೋಷನ್ ತಂದೆ ಹಾಗೂ ಇತರರಿಂದ ತಮಗೆ ಯಾವ ರೀತಿ ಜೀವ ಬೆದರಿಕೆ ಬಂತು, ಆ ಸಮಯದಲ್ಲಿ ಹೃತಿಕ್ ನಡೆಸಿಕೊಂಡ ರೀತಿ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.
ಹೃತಿಕ್ ಮಾತ್ರವಲ್ಲದೇ, ಇವರ ಹೆಸರು ನಟರಾದ ಆದಿತ್ಯ ಪಂಚೋಲಿ, ಅಧ್ಯಯನ್ ಸುಮನ್ ಜತೆಗೂ ಕೇಳಿಬಂದಿತ್ತು. ಒಟ್ಟಿನಲ್ಲಿ ಇದೀಗ ಆಕೆ ಯಾರ ಬಗ್ಗೆ ಈ ಮಾತು ಆಡಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.