
ಆತ ಕಾಲಿಯಾ ರಫೀಕ್, ಮಂಗಳೂರಿನಲ್ಲಿ ಕೊಚ್ಚಿ ಕೊಲೆಯಾಗಿದ್ದ-ಈತನ ಹಂತಕ ಜಿಯಾ ಮುಂಬಯಿನಲ್ಲಿ ಕೇರಳದ ಎಟಿಎಸ್ ಗೆ ಸಿಕ್ಕಿಬಿದ್ದ !
Friday, November 12, 2021
ಮಂಗಳೂರು: ಮಂಗಳೂರಿನ ಕೋಟೆಕಾರ್ ನಲ್ಲಿ ಕೊಲೆಯಾಗಿದ್ದ ಕುಖ್ಯಾತ ಗ್ಯಾಂಗ್ ಸ್ಟಾರ್ ಕಾಲಿಯಾ ರಫೀಕ್ ನನ್ನು ಕೊಲೆ ಮಾಡಿದ ಪ್ರಕರಣದ ಆರೋಪಿ ಜಿಯಾ ಎಂಬಾತನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೇರಳದ ಎಟಿಎಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದ ಪೈವಳಿಕೆಯ ಆರೋಪಿ ಜಿಯಾ ಕೇರಳ ಮತ್ತು ಮಂಗಳೂರಿನ ಪೊಲೀಸರಿಗೆ ಬೇಕಾಗಿದ್ದ. ತನ್ನ ಪಾತಕ ಕೃತ್ಯಗಳಿಂದ ಕೇರಳ ಮತ್ತು ಮಂಗಳೂರು ಪೊಲೀಸರ ಮೋಸ್ಟ್ ವಾಂಟೆಂಡ್ ಆಗಿದ್ದ ಈತ ವಿದೇಶಕ್ಕೆ ಪರಾರಿಯಾಗಿದ್ದ.
ಜಿಯಾ ರೌಡಿಶೀಟರ್ ಕಾಲಿಯಾ ರಫೀಕ್ ಮತ್ತು ತಸ್ಲೀಮ್ ಹತ್ಯೆ ,ಬಾಲಿಕಾ ಅಜೀಜ್ ಹತ್ಯೆ ಪ್ರಕರಣ ಮತ್ತು ಆಸೀಫ್ ಬಾಯಿಕಟ್ಟೆ ಹತ್ಯೆ ಪ್ರಕರಣಲ್ಲಿಯೂ ಪೊಲೀಸರಿಗೆ ಬೇಕಾಗಿದ್ದ.
ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳವನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದ್ದಕಾಲಿಯಾ ರಫೀಕ್ ನನ್ನು ಕೆಲ ವರ್ಷಗಳ ಹಿಂದೆ ಮಂಗಳೂರಿನ ಕೋಟೆಕಾರಿನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹಲವರು ಬಂಧಿತರಾಗಿದ್ದು ಜಿಯಾ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
ಜಿಯಾ ರಹಸ್ಯವಾಗಿ ಇತ್ತೀಚೆಗೆ ವಿದೇಶದಿಂದ ಬಂದಿದ್ದನು. ಮತ್ತೆ ವಿದೇಶಕ್ಕೆ ವಾಪಾಸು ತೆರಳಲು ಗುರುವಾರ ಮುಂಬಯಿ ಸಹಾರಾ ವಿಮಾನ ನಿಲ್ದಾಣಕ್ಕೆ ಬಂದಾಗ ಮಾಹಿತಿ ಪಡೆದ ಕೇರಳದ ಎಟಿಎಸ್ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ