
ಪ್ರಿಯತಮೆಗಾಗಿ ಜಗಳವಾಡಿದಾತ ಜೈಲಿನಲ್ಲಿಯೇ ಮೃತ್ಯು: ಲಾಕ್ ಅಪ್ ಡೆತ್ ಆರೋಪ
Monday, November 29, 2021
ಮೈಸೂರು: ಪ್ರಿಯತಮೆಗಾಗಿ ಜಗಳ ಮಾಡಿಕೊಂಡು ಜೈಲುಪಾಲಾಗಿದ್ದವ ಜೈಲಲ್ಲಿ ಮೃತಪಟ್ಟಿರುವುದು, ಹಲವಾರು ಅನುಮಾನಕ್ಕೆ ಎಡೆ ಮಾಡಿದೆ. ಈ ಮೂಲಕ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯು ಲಾಕಪ್ ಡೆತ್ ಆರೋಪಕ್ಕೆ ಗುರಿಯಾಗಿದೆ.
ನಂಜನಗೂಡು ತಾಲೂಕಿನ ಬ್ಯಾಳಾರುಹುಂಡಿ ನಿವಾಸಿ ಸಿದ್ದರಾಜು (31) ಲಾಕಪ್ ಡೆತ್‌ಗೆ ಒಳಗಾದ ಯುವಕ.
ಸಿದ್ದರಾಜು ಪಾನಮತ್ತನಾಗಿ ಪ್ರೇಯಸಿಯ ಮನೆಗೆ ಹೋಗಿ, ಇನ್ನೊಬ್ಬ ವ್ಯಕ್ತಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಈ ಸಂಬಂಧ ಸಿದ್ದರಾಜುವನ್ನು ವಶಕ್ಕೆ ಪಡೆದಿರುವ ಪೊಲೀಸರು, ಅನೈತಿಕ ಸಂಬಂಧದ ಆರೋಪದ ಮೇಲೆ ಠಾಣೆಗೆ ಕರೆದುಕೊಂಡು ಬಂದಿದ್ದರು.
ಸಿದ್ದರಾಜುವಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸದೆ ಠಾಣೆಯಲ್ಲಿ ಇರಿಸಿಕೊಂಡಿದ್ದರು ಎನ್ನಲಾಗಿದೆ. ಇದೀಗ ಆತ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದಾನೆ. ಆತ ಮೃತಪಡುತ್ತಿದ್ದಂತೆ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಸಿದ್ದರಾಜು ಠಾಣೆಯಲ್ಲಿ ಸತ್ತಿದ್ದು, ಇದು ಲಾಕಪ್ ಡೆತ್ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಹೀಗಾಗಿ ಆಸ್ಪತ್ರೆ ಮುಂದೆ ಬಿಗು ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಎಸ್‌ಪಿ ಆರ್.ಚೇತನ್, ಎಎಸ್‌ಪಿ ಶಿವಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.