Crime- ಮಂಗಳೂರು : ಪಾಲಿಕೆ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಪಾಲಿಕೆ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಮಂಗಳೂರಿನ ಉರ್ವಸ್ಟೋರ್ ಸಮೀಪ ದಡ್ಡಲ್‌ಕಾಡ್ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಬೆಳಿಗ್ಗೆ ಮನೆಯೊಂದಕ್ಕೆ ಆಗಮಿಸಿದ ಇಬ್ಬರು ತಮ್ಮನ್ನು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಸ್ವಚ್ಚತೆಯ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಹೇಳಿ ಮನೆಯಲ್ಲಿದ್ದ ಮಹಿಳೆಯನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಮನೆಯ ಮಹಿಳೆಗೆ ಅನುಮಾನ ಉಂಟಾಗಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಬಳಿಕ, ಅವರಲ್ಲಿ ಗುರುತಿನ ಚೀಟಿ ನೀಡುವಂತೆ ಕೇಳಿದ್ದಾರೆ.
ಆಗ ಇಬ್ಬರು, ಗುರುತಿನ ಚೀಟಿ ಬೈಕ್‌ನಲ್ಲಿ ಇದೆ, ತರುತ್ತೇವೆ ಎದು ಹೇಳಿ ಹೋದವರು ಆ ಬೈಕ್‌ನಲ್ಲಿ ಕಣ್ಮರೆಯಾಗಿದ್ದಾರೆ.
ಸಂಜೆ ವೇಳೆ ಮನೆಯಲ್ಲಿ ಪರಿಶೀಲಿಸಿದಾಗ, ಮನೆಯ ಕಪಾಟಿನಲ್ಲಿದ್ದ 68 ಗ್ರಾಂ ಚಿನ್ನಾಭರಣ ಮತ್ತು ಸುಮಾರು 71000/- ನಗದು ಕಳವಾಗಿರುವುದು ಗಮನಕ್ಕೆ ಬಂದಿದೆ.
ಮನೆಯ ಹಿಂಬದಿ ಸ್ವಚ್ಚತೆಯ ಪರಿಶೀಲನೆ ನಾಟಕವಾಡುವಾಗ ಇನ್ನೊಬ್ಬಾತ ಮನೆಗೆ ನುಗ್ಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.