Mangaluru: ಮುಸ್ಲಿಂ ಯುವಕನೊಂದಿಗೆ ಮಂಗಳೂರು ಹಿಂದೂ ಯುವತಿ ಯ ಮದುವೆ ಫಿಕ್ಸ್: ಗುರುಪುರ ಸ್ವಾಮೀಜಿ ಮಧ್ಯಸ್ತಿಕೆಯಲ್ಲಿ ನಡೆದದ್ದೇನು?
Saturday, November 20, 2021
ಮಂಗಳೂರು: ಮಂಗಳೂರಿನ ಹಿಂದೂ ಯುವತಿ ಹಾಗೂ ಕೇರಳದ ಮುಸ್ಲಿಂ ಯುವಕನ ಲಗ್ನಪತ್ರಿಕೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಂತೆ, ಹಿಂದೂ ಸಂಘಟನೆಗಳ ನಾಯಕರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಧ್ಯ ಪ್ರವೇಶಿಸಿದ್ದಾರೆ.
ಇಂದು ಯುವತಿಯ ಮನೆಗೆ ತೆರಳಿರುವ ಇವರು, ಹಿಂದೂ ಯುವತಿ ಹಾಗೂ ಆಕೆಯ ಮನೆಯವರ ಮನವೊಲಿಸಲು ಪ್ರಯತ್ನ ಪಟ್ಟಿದ್ದಾರೆ. ಸ್ವಾಮೀಜಿ ನೇತೃತ್ವದಲ್ಲಿ ಹಿಂದೂ ಸಂಘಟನೆಯ ಮುಖಂಡರು ಪಾಂಡೇಶ್ವರದಲ್ಲಿರಿವ ಆಕೆಯ ಮನೆಗೆ ತೆರಳಿ ಯುವತಿಯೊಂದಿಗೆ, ಮನೆಯವರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಮಾತನಾಡಿದ್ದಾರೆ.
ಈ ಬಗ್ಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಇತ್ತೀಚಿನ ಆಸಿಯಾ ಪ್ರಕರಣ, ಸೌಮ್ಯಾ, ಪ್ರಿಯಾಂಕಾ ಪ್ರಕರಣಗಳನ್ನು ಸೇರಿದಂತೆ ಹತ್ತಾರು ಪ್ರಕರಣದಲ್ಲಿ ಹಿಂದು ಯುವತಿಯರು ಪ್ರೀತಿಯ ಬಲೆಗೆ ಬಿದ್ದು, ಮುಸ್ಲಿಂ ಯುವಕರನ್ನು ಮದುವೆಯಾಗಿ ಸಂಕಷ್ಟಕ್ಕೆ ಒಳಗಾಗಿದ್ದನ್ನು ಆಕೆಗೆ ಮನವರಿಕೆ ಮಾಡಿದ್ದೇವೆ. ಈ ಬಗ್ಗೆ ಆಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾಳೆ. ನಮ್ಮ ಮಾತಿಗೂ ಧನಾತ್ಮಕವಾಗಿ ಸ್ಪಂದಿಸಿದ್ದಾಳೆ.
ಆದ್ದರಿಂದ ನಾವು ಈ ಮದುವೆಯನ್ನು ಸ್ವಲ್ಪ ಕಾಲದವರೆಗೆ ಮುಂದೂಡಲು ಸಲಹೆ ನೀಡಿದ್ದೇವೆ. ಇದೀಗ ಮದುವೆ ಸ್ವಲ್ಪ ಕಾಲ ಮುಂದೂಡುತ್ತೇವೆ ಎಂದು ಅವರೂ ಹೇಳಿದ್ದಾರೆ. ಆ ಬಳಿಕ ಯುವತಿ ಮನೆಯವರೊಂದಿಗೆ ಚರ್ಚಿಸಿ ನಾವು ಮುಂದಿನ ಹೆಜ್ಜೆ ಇರಿಸಲಿದ್ದೇವೆ ಎಂದರು.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದ ಸಂದರ್ಭ ಮುಸ್ಲಿಂ ಯುವಕ ಜಾಫರ್ ಹಾಗೂ ಹಿಂದೂ ಯುವತಿ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಅದರಂತೆ ಇದೀಗ ಹಿಂದೂ ಯುವತಿ ಹಾಗೂ ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಜಾಫರ್ ಮದುವೆ ನಡೆಸಲು ತಯಾರಿ ನಡೆದಿದೆ. ನ.29ರಂದು ಕಣ್ಣೂರಿನ ಬೀಚ್ ರೆಸಾರ್ಟ್ ಒಂದರಲ್ಲಿ ಮದುವೆ ರಿಸೆಪ್ಶನ್ ನಡೆಯುವ ಬಗ್ಗೆ ಆಮಂತ್ರಣ ಪತ್ರ ವೈರಲ್ ಆಗಿದೆ.