Mangaluru: ಸುರತ್ಕಲ್ ನಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿ ಮೇಲೆ ನಡೆಯಿತು ನೈತಿಕ ಪೊಲೀಸ್ ಗಿರಿ; ಯುವತಿಯ ಮೇಲೆ ಕೈಹಾಕಿ ಮಾನಹಾನಿ ಯತ್ನ
Tuesday, November 16, 2021
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನೈತಿಕ ಪೊಲೀಸ್ ಗಿರಿ ಘಟನೆಯು ನಿರಂತರವಾಗಿ ನಡೆಯುತ್ತಿದ್ದು, ಕಠಿಣ ಕಾನೂನು ಕ್ರಮದ ಭೀತಿಯಿಲ್ಲದೆ ಎಗ್ಗಿಲ್ಲದೆ ಇಂತಹ ಪ್ರಕರಣ ಪದೇ ಪದೇ ನಡೆಯುತ್ತಿದೆ. ಕಳೆದ 2-3 ತಿಂಗಳ ಒಳಗೆ ಜೊತೆಜೊತೆ ಓಡಾಟ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ರೀತಿಯ ದುಷ್ಕೃತ್ಯ ಎಸಗಲಾಗುತ್ತಿದೆ. ಇದೀಗ ಅದಕ್ಕೆ ಹೊಸದಾಗಿ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.
ಕಾಲೇಜು ಸ್ನೇಹಿತೆಯನ್ನು ಬೈಕ್ ನಲ್ಲಿ ಕರೆದೊಯ್ದಿರುವುದನ್ನು ವಿರೋಧಿಸಿರುವ ಯುವಕರ ತಂಡವೊಂದು ವಿದ್ಯಾರ್ಥಿ - ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದಿರುವ ಘಟನೆ ನಗರದ ನಗರದ ಸುರತ್ಕಲ್ ಬಳಿ ಅ.15ರಂದು ರಾತ್ರಿ 10ಗಂಟೆಗೆ ನಡೆದಿದೆ. ಪ್ರಕರಣದ ಸಂಬಂಧ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಹ್ಲಾದ ಆಚಾರ್ಯ, ಪ್ರಶಾಂತ್ ಆಚಾರ್ಯ, ಗುರುಪ್ರಸಾದ್, ಪ್ರತೀಶ್ ಆಚಾರ್ಯ, ಭರತ್ ಶೆಟ್ಟಿ ಸೇರಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು 10ಗಂಟೆಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗೆ ಸ್ನೇಹಿತೆಯಾಗಿದ್ದ ಅದೇ ಕಾಲೇಜಿನ ವಿದ್ಯಾರ್ಥಿನಿ ಕರೆ ಮಾಡಿದ್ದಾರೆ. ಆಕೆ ತನ್ನನ್ನು ಮುಕ್ಕದಿಂದ ಸುರತ್ಕಲ್ ನಲ್ಲಿರುವ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್‌ಮೆಂಟ್ ಗೆ ಬೈಕ್ ನಲ್ಲಿ ಕರೆದೊಯ್ದು ಬಿಡುವಂತೆ ಹೇಳಿದ್ದಾರೆ. ಅದರಂತೆ ಆತ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭ ಅವರನ್ನು ಬೆನ್ನಟ್ಟಿದ ಯುವಕ ತಂಡ ಅಪಾರ್ಟ್‌ಮೆಂಟ್ ತಲುಪುತ್ತಿದ್ದಂತೆ ಬಂದು ತಡೆದು ನಿಲ್ಲಿಸಿದ್ದಾರೆ. ಬಳಿಕ ಇಬ್ಬರ ಹೆಸರು ಕೇಳಿ ಅವಾಚ್ಯ ಶಬ್ದಗಳಿಂದ ಇಬ್ಬರನ್ನೂ ನಿಂದಿಸಿದ್ದಾರೆ. ಅಲ್ಲದೆ ಯುವತಿಗೆ 'ನಿನಗೆ ಮುಸ್ಲಿಂ ಹುಡುಗನೇ ಬೇಕಾ, ಹಿಂದೂಗಳು ಯಾರೂ ಸಿಗೋಲ್ವಾ' ಎಂದು ಬೈದು ಮೈಮೇಲೆ ಕೈಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ವಿದ್ಯಾರ್ಥಿಗಳಿಬ್ಬರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಾತ್ರಿಯೇ ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.