Mangaluru: ಮೆಲ್ಕಾರ್ ನಲ್ಲಿ ತಡರಾತ್ರಿ ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು
Wednesday, November 17, 2021
ಬಂಟ್ವಾಳ: ಇಲ್ಲಿನ ಮೆಲ್ಕಾರ್ ಜಂಕ್ಷನ್ ಬಳಿ ನ.16ರಂದು ತಡರಾತ್ರಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮಂಗಳೂರು ನಿವಾಸಿ ಗಣೇಶ್(36) ಮೃತಪಟ್ಟವರು. ಗಣೇಶ್ ಅವರು ಮೆಲ್ಕಾರ್ ಜಂಕ್ಷನ್ ನಲ್ಲಿ ಬೈಕ್ ಸವಾರಿ ಮಾಡುತ್ತಾ ಮುಡಿಪು ರಸ್ತೆಗೆ ಕ್ರಾಸ್ ಮಾಡುತ್ತಿದ್ದರು. ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ.
ಪರಿಣಾಮ ರಸ್ತೆಗೆ ಬಿದ್ದ ಗಣೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಸುಕಿನ ವೇಳೆ ಮೃತಪಟ್ಟಿದ್ದಾರೆ.
ಗಣೇಶ್ ಅವರು ಮೆಲ್ಕಾರ್ ಸಮೀಪದ ಮಾರ್ನಬೈಲು ಸರ್ವೀಸ್ ಸ್ಟೇಷನ್ ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ಘಟನೆಯ ಸಂದರ್ಭ ಲಾರಿ ಚಾಲಕ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದ್ದರಿಂದ ಮೆಲ್ಕಾರ್ ನಲ್ಲಿದ್ದ ಸರ್ಕಲ್ ಗೆ ಹಾನಿಯಾಗಿದೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.