
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆಹಚ್ಚಿದ ಶ್ವಾನ ಲೀನಾ ಇನ್ನಿಲ್ಲ
Monday, November 22, 2021
ಮಂಗಳೂರು: ದೇಶಾದ್ಯಂತ ತಲ್ಲಣಗೊಂಡಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಅನ್ನು ಪತ್ತೆ ಹಚ್ಚಿರುವ ಲೀನಾ ಎಂಬ ಶ್ವಾನವು ಅನಾರೋಗ್ಯದಿಂದ ರವಿವಾರ ಮೃತಪಟ್ಟಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಶ್ವಾನ ದಳದಲ್ಲಿ ಲೀನಾ ಕಾರ್ಯ ನಿರ್ವಹಿಸುತ್ತಿತ್ತು. 8 ವರ್ಷ ಒಂಬತ್ತು ತಿಂಗಳಿನ ಲ್ಯಾಬ್ರಡೋರ್ ತಳಿಯ ಶ್ವಾನ ಲೀನಾ ಅನಾರೋಗ್ಯದಿಂದ ಮೃತಪಟ್ಟಿದೆ.
ಬಾಂಬ್ ಪತ್ತೆ ಕಾರ್ಯದಲ್ಲಿ ನಿಷ್ಣಾತೆಯಾಗಿರುವ ಲೀನಾ ಕಳೆದ ಕೆಲ ಸಮಯಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿತ್ತು. ಫೆ.16ರಿಂದ ಲೀನಾ ಆಹಾರ ಸೇವನೆಯನ್ನೂ ಬಿಟ್ಟಿದ್ದು, ಗ್ಲೂಕೋಸ್ ಮಾತ್ರ ಸೇವಿಸುತ್ತಿತ್ತು. ಆದರೆ ರವಿವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಸಕಲ ಸೇನಾ ಗೌರವದೊಂದಿಗೆ ಲೀನಾ ಅಂತ್ಯ ಸಂಸ್ಕಾರವನ್ನು ವಿಮಾನ ನಿಲ್ದಾಣದ ಆವರಣದಲ್ಲಿ ನೆರವೇರಿಸಲಾಗಿದೆ.
ಲೀನಾ 2013ರ ಮೇ 5ರಂದು ಜನಿಸಿದ್ದು, ಆಕೆಗೆ ರಾಂಚಿಯಲ್ಲಿ ಸ್ಪೋಟಕ ಪತ್ತೆ ಕಾರ್ಯಾಚರಣೆ ತರಬೇತಿ ನೀಡಲಾಗಿತ್ತು. ತರಬೇತಿ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಶ್ವಾನದಳಕ್ಕೆ ಸೇರ್ಪಡೆಗೊಂಡಿತ್ತು. ಶ್ವಾನದಳ ವಿಭಾಗದ 4 ಶ್ವಾನಗಳಲ್ಲಿಯೇ ಲೀನಾ ಅತ್ಯಂತ ಚುರುಕಿನ ಶ್ವಾನವಾಗಿತ್ತು. ಬಾಂಬ್ ಪತ್ತೆಯಲ್ಲೂ ನಿಷ್ಣಾತೆಯಾಗಿತ್ತು. ಲೀನಾ ಅನಾರೋಗ್ಯದ ಹಿನ್ನೆಲೆಯಲ್ಲಿ ಬೇರೊಂದು ಶ್ವಾನವನ್ನು ವಿಮಾನ ನಿಲ್ದಾಣದ ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಳಿಸಿ ರಾಂಚಿಯಲ್ಲಿ ತರಬೇತಿ ನೀಡಲಾಗುತ್ತಿದೆ.