Mangaluru: ರಸ್ತೆ ಅಪಘಾತಕ್ಕೆ ಯುವಕ ಬಲಿ; ಹಂತಕನಾಗಿ ಕಾಡಿತೇ ಕಾರು
Friday, November 5, 2021
ಮಂಗಳೂರು: ಕಾರು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆಯೇ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಗರದ ಬಜ್ಪೆ ಸಮೀಪದ ಕರಂಬಾರು ಮಸೀದಿ ಬಳಿ ನಿನ್ನೆ ಸಂಜೆ ನಡೆದಿದೆ.
ಮಂಗಳೂರು ಕದ್ರಿ ನಿವಾಸಿ ಸಂದೇಶ್(27) ಮೃತ ಬೈಕ್ ಸವಾರ.
ಮೃತ ಸಂದೇಶ್ ತಮ್ಮ ಬೈಕ್ ನಲ್ಲಿ ಬಜ್ಪೆಯಿಂದ ಮಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದರು. ಈ ವೇಳೆ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸಂದೇಶ್ ರಸ್ತೆಗೆಸೆಯಲ್ಪಟ್ಟಿದ್ದಾರೆ. ಆಗ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿಯೊಂದು ಸಂದೇಶ್ ಮೇಲೆಯೇ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಸಂದೇಶ್ ಖಾಸಗಿ ಆಹಾರ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಆಗಿ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದಿರುವ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಜರು ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.