ಭೀಕರ ಕಾರು ಅಪಘಾತದಲ್ಲಿ ಮಾಡೆಲ್ ಗಳಿಬ್ಬರ ದುರ್ಮರಣ ಪ್ರಕರಣ: ಆರೋಪಿ ಮೊಬೈಲ್ ನಲ್ಲಿ ಮಹತ್ವದ ಸುಳಿವು ಲಭ್ಯ, ಬಯಲಾಯಿತು ಭಯಾನಕ ಸತ್ಯ
Tuesday, November 30, 2021
ಕೊಚ್ಚಿ: ಕೇರಳದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮಾಡೆಲ್ ಗಳಿಬ್ಬರ ದುರ್ಮರಣ ಪ್ರಕರಣವು ಅಂತ್ಯ ಕಾಣದೆ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. ಪ್ರಕರಣದ ಸುತ್ತಾ ಆರಂಭದಿಂದಲೇ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು.
ಮಾಡೆಲ್ಗಳು ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೋಟೆಲ್ ಮಾಲಕನ ನಡೆ, ಅಪಘಾತಕ್ಕೀಡಾದ ಕಾರನ್ನು ಚೇಸ್ ಮಾಡಿದ್ದ ಆಡಿ ಕಾರು, ಪ್ರಕರಣದ ಹಿಂದೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ, ಇದೊಂದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ಸಂಭವಿಸಿರುವ ದುರ್ಘಟನೆ ಎಂದು ನಿಗೂಢತೆಗೆ ತೆರೆ ಎಳೆಯಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ ಅಪಘಾತಕ್ಕೀಡಾದ ಕಾರು ಚಲಾಯಿಸಿದಾತನ ಹೇಳಿಕೆ ಹಾಗೂ ಹೋಟೆಲ್ ಮಾಲಕನ ನಿಗೂಢ ನಡೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿತ್ತು.
ಇದೀಗ ಅಪಘಾತಕ್ಕೀಡಾದ ಐಷಾರಾಮಿ ಆಡಿ ಕಾರು ಚಾಲಕನ ಮೊಬೈಲ್ನಲ್ಲಿ ಪತ್ತೆಯಾಗಿರುವ ವೀಡಿಯೋಗಳು ಪ್ರಕರಣ ಮತ್ತಷ್ಟು ಗಂಭೀರವಾಗಿದೆ ಎಂಬಂತಹ ಸಂದರ್ಭವನ್ನು ಸೃಷ್ಟಿಸಿದೆ. ಅಪಘಾತವಾದ ದಿನ ಮಾಡೆಲ್ಗಳಿದ್ದ ಕಾರನ್ನು ಹಿಂಬಾಲಿಸಿದ್ದ ಶಂಕಿತ ಡ್ರಗ್ಸ್ ಪೆಡ್ಲರ್ ಸೈಜು ಥಾಂಕಚನ್ ಮೊಬೈಲ್ನಲ್ಲಿ ಪ್ರಕರಣಕ್ಕೆ ಬೇಕಾದ ಮಹತ್ವದ ಮಾಹಿತಿ ಕೇರಳ ಪೊಲೀಸರಿಗೆ ಲಭ್ಯವಾಗಿದೆ.
ಅಲ್ಲದೆ, ಫೋರ್ಟ್ ಕೊಚ್ಚಿಯಲ್ಲಿರುವ ನಂ.18 ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಮೊಬೈಲ್ಗಳಿಂದ ವೀಡಿಯೋಗಳನ್ನು ಸಂಗ್ರಹಿಸಲಾಗಿದೆ. ಆರೋಪಿ ಸೈಜು ಕೂಡ ಅದೇ ದಿನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಪಾರ್ಟಿ ಮುಗಿದ ಬೆನ್ನಲ್ಲೇ ಮಾಡೆಲ್ಗಳಿಬ್ಬರನ್ನು ತನ್ನ ಐಷಾರಾಮಿ ಆಡಿ ಕಾರಿನಲ್ಲಿ ಸೈಜು ಹಿಂಬಾಲಿಸಿದ್ದ. ಅದೇ ದಿನ ಮಾಡೆಲ್ಗಳಿದ್ದ ಕಾರು ಅಪಘಾತವಾಗಿತ್ತು. ಸೈಜು ಮೊಬೈಲ್ನಿಂದ ಪಡೆಯಲಾದ ವೀಡಿಯೋಗಳಲ್ಲಿ ಅನೇಕ ಇತರೆ ಯುವತಿಯರು ಇರುವುದು ಪತ್ತೆಯಾಗಿದೆ.
ಸೈಜು ಯುವತಿಯರಿಗೆ ಡ್ರಗ್ಸ್ ನೀಡುವ ಮೂಲಕ ಅಮಲು ಆಗುವಂತೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂಬುದು ವೀಡಿಯೋ ಸಾಕ್ಷಿಯಲ್ಲಿರುವುದಾಗಿ ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ. ಆತನ ಮೊಬೈಲ್ ಫೋನ್‌ನಲ್ಲಿರುವ ದೃಶ್ಯಗಳ ಪ್ರಕಾರ ಕೊಚ್ಚಿಯ ಅನೇಕ ಐಷಾರಾಮಿ ಹೋಟೆಲ್‌ಗಳಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸೈಜು ಪ್ರಮುಖ ಆಯೋಜಕನಾಗಿದ್ದ ಎಂಬ ಪೊಲೀಸರ ಹಿಂದಿನ ಅನುಮಾನಗಳಿಗೆ ಪುಷ್ಠಿ ನೀಡಿದೆ. ಅಲ್ಲದೆ,ಈತ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದವರಿಗೆ ಡ್ರಗ್ಸ್ ಕೂಡ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.
ಸದ್ಯ ಆರೋಪಿ ಸೈಜು ಪೊಲೀಸ್ ಕಸ್ಟಡಿಯಲ್ಲಿದ್ದು, ರವಿವಾರ ಆತನನ್ನು ವಿವರಣಾತ್ಮಕವಾಗಿ ವಿಚಾರಣೆ ನಡೆಸಲಾಗಿದೆ. ಮೊಬೈಲ್ನಲ್ಲಿ ಪತ್ತೆಯಾದ ವೀಡಿಯೋದಲ್ಲಿ ಇರುವವರ ಬಗ್ಗೆಯೂ ಆತ ಮಾಹಿತಿ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಸೈಜುವಿನ ವಾಟ್ಸ್ಆ್ಯಪ್ ಚಾಟ್ಸ್ ಮತ್ತು ಫೋನ್ ಕಾಲ್ ರೆಕಾರ್ಡ್ಸ್ಗಳನ್ನು ಕೂಡ ಪೊಲೀಸರು ಪರೀಕ್ಷಿಸುತ್ತಿದ್ದಾರೆ. ಅಲ್ಲದೆ ಆರೋಪಿ ಸೈಜು ಮಾಡೆಲ್‌ಗಳ ಕಾರನ್ನು ಚೇಸ್ ಮಾಡಿರುವುದು ಕೂಡ ದುರುದ್ದೇಶ ಪೂರಿತವಾಗುರುವುದರಿಂದಲೇ ಎಂಬ ಅಂಶ ವಿಚಾರಣೆ ವೇಳೆ ಪೊಲೀಸರಿಗೆ ದೊರಕಿದೆ.
ಆರೋಪಿ ಸೈಜು ಬೆದರಿಕೆಯ ಧ್ವನಿಯಲ್ಲಿ ಮಾಡೆಲ್‌ಗಳಿಗೆ ರಾತ್ರಿ ವೇಳೆ ತನ್ನ ಮನೆ ಅಥವಾ ಹೋಟೆಲ್‌ನಲ್ಲಿ ಉಳಿದುಕೊಂಡು ಮರುದಿನ ಬೆಳಗ್ಗೆ ತಮ್ಮ ಮನೆಗಳಿಗೆ ಪ್ರಯಾಣ ಬೆಳೆಸುವಂತೆ ಹೇಳಿದ್ದ ಎಂದು ಪೊಲೀಸರಿಗೆ ವಿಚಾರಣೆ ವೇಳೆ ದೃಢಪಟ್ಟಿದೆ. ಅವನ ಹಿಡಿತದಿಂದ ಪಾರಾಗಲು ಯುವತಿಯರು ಹೋಟೆಲ್ನಿಂದ ಹೋಗುವ ಮಾರ್ಗ ಮಧ್ಯೆ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ. ಮಾಡೆಲ್‌ಗಳ ಕಾರನ್ನು ಹಿಂಬಾಲಿಸಲು ಸೈಜು ಬಳಸುತ್ತಿದ್ದ ಐಷಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ ಡಿಜೆ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಬಳಸುವ ಸ್ಪೀಕರ್ ಹಾಗೂ ಆಲ್ಕೋಹಾಲ್ ಅಳತೆಯ ಕಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 1ರಂದು ಫೋರ್ಟ್ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹೋಗುವ ಸಂದರ್ಭ ಕೇರಳದ ವ್ಯಟ್ಟಿಲ-ಪಲರಿವಟ್ಟಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್ಗಳು ದುರ್ಮರಣಕ್ಕೀಡಾಗಿದ್ದರು.
ಘಟನೆಯಲ್ಲಿ 2019ರ ಮಿಸ್ ಕೇರಳ ವಿಜೇತೆ ಅಟ್ಟಿಂಗಲ್ ಮೂಲದ ಅನ್ಸಿ ಕಬೀರ್ (25), ತ್ರಿಸ್ಸೂರ್ ಮೂಲದ ರನ್ನರ್ ಅಪ್ ಅಂಜನಾ ಶಾಜನ್ (24) ಮತ್ತು ಕೆ.ಎ. ಮೊಹಮ್ಮದ್ ಆಶಿಕ್ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸಿದ್ದ ಚಾಲಕ ಅಬ್ದುಲ್ ರೆಹಮಾನ್ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದಾನೆ.
ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್ ನಂಬರ್ 18 ಮಾಲಕ ರಾಯ್ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್ರನ್ನು ಸಂಪರ್ಕಿಸಿದ್ದಾರೆ. ರಾಯ್ ಹಾಗೂ ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. ಅಪಘಾತದ ಬೆನ್ನಲ್ಲೇ ಸೈಜು, ರಾಯ್ ಮತ್ತು ಹೋಟೆಲ್ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ.
ಆದರೆ, ಸೈಜು ಮಾತ್ರ ಹೋಟೆಲ್ನಿಂದ ಹೊರಟ ಮಾಡೆಲ್ಗಳು ಮತ್ತು ಕಾರಿನ ಚಾಲಕ ಅಬ್ದುಲ್ ರೆಹಮಾನ್ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಹಾಗೂ ಅತಿ ವೇಗವಾಗಿ ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದ್ದೆ ಎಂದು ಹೇಳಿದ್ದನೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ. ಅಲ್ಲದೆ, ಆತ ದುರುದ್ದೇಶ ಹೊಂದಿದ್ದ ಎಂಬುದು ಕೂಡ ಇದೀಗ ತಿಳಿದುಬಂದಿದೆ. ಪ್ರಕರಣ ಇನ್ನುಷ್ಟು ನಿಗೂಢವಾಗುತ್ತಿದೆ. ಸದ್ಯ ತನಿಖೆ ಮುಂದುವರಿದಿದ್ದು, ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.