ಕಲಬುರಗಿ ಪೊಲೀಸ್ ಪೇದೆ ಪುತ್ರನ ಅಟ್ಟಾಡಿಸಿಕೊಂಡು ಅಂತ್ಯಗೊಳಿಸಿದ್ದು ಕಾನ್ ಸ್ಟೇಬಲ್ ಪುತ್ರ: ಪೊಲೀಸ್ ತನಿಖೆಯಿಂದ ರೋಚಕ ತಿರುವು
Friday, November 5, 2021
ಕಲಬುರಗಿ: ಕಲಬುರಗಿ ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಿನ್ನೆ ನಡೆದ ಪೊಲೀಸ್ ಪೇದೆಯ ಪುತ್ರನ ಭೀಕರ ಕೊಲೆ ಪ್ರಕರಣದ ಆರೋಪಿಗಳ ಆರೋಪಿಗಳ ಗುರುತು ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದ ವ್ಯಕ್ತಿಯೋರ್ವರ ಪುತ್ರ ಅಭಿಷೇಕ್ ನಂದೂರ್(27) ಅವರನ್ನು ಸಾರ್ವಜನಿಕರ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಮೃತುಜಾ, ಸಾಗರ್, ಆಕಾಶ್, ಶುಭಮ್ ತಂಡ ಕೊಲೆ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಜಿಮ್‌ಗೆ ಹೋಗಲು ಅಭಿಷೇಕ್ ಬೆಳಗ್ಗೆ ಮನೆಯಿಂದ ತಮ್ಮ ದ್ವಿಚಕ್ರ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಬೈಕ್‌ನಲ್ಲಿ ಬೆನ್ನಟ್ಟಿಕೊಂಡು ಡಿಕ್ಕಿ ಹೊಡೆಸಿದ್ದಾರೆ. ಅಭಿಷೇಕ್ ಬಿದ್ದಾಗ ದುಷ್ಕರ್ಮಿಗಳ ಗ್ಯಾಂಗ್ ಅಟ್ಟಾಡಿಸಿಕೊಂಡು ಬಂದು ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದೆ. ಕೊಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅಲ್ಲದೆ ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಕೂಡ ವೀಡಿಯೋ ಮಾಡಿದ್ದರು. ಆ ಬಳಿಕ ಹಂತಕರು ಅಲ್ಲಿಂದ ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಜಾಡು ತಿಳಿದು ಬಂದಿದೆ. ಜೊತೆಗೆ ಪೊಲೀಸ್ ಕಾನ್ಸ್‌ಟೆಬಲ್ ಪುತ್ರನೇ ಈ ಕೊಲೆಯ ಸೂತ್ರಧಾರಿ ಎಂಬ ಶಾಕಿಂಗ್ ವಿಚಾರ ಬಯಲಾಗಿದೆ.
ಕೊಲೆಯಾಗಿರುವ ಅಭಿಷೇಕ್ ಈ ಹಿಂದೆ ಪೊಲೀಸ್ ಕಾನ್ ಸ್ಟೇಬಲ್ ಪುತ್ರ ಸಾಗರ್ ಮೇಲೆ ಹಲ್ಲೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅಭಿಷೇಕ್ ಮೇಲೆ ದ್ವೇಷ ಬೆಳೆಸಿಕೊಂಡ ಸಾಗರ್ ಆತನನ್ನು ಮುಗಿಸಲು ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ಗೆಳೆಯರ ತಂಡವೊಂದನ್ನು ತಯಾರು ಮಾಡಿದ್ದಾನೆ. ನಿನ್ನೆ ಯಾವತ್ತಿನಂತೆ ಅಭಿಷೇಕ್ ಜಿಮ್ ಗೆಂದು ಬರುವುದನ್ನೇ ಕಾಯುತ್ತಿದ್ದ ತಂಡ, ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಹಂತಕರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಮಕ್ಕಳೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡರೆ, ಇನ್ನು ಮಿಕ್ಕುಳಿದವರ ಪರಿಸ್ಥಿತಿ ಹೇಗೆ ಎಂದು ಸ್ಥಳೀಯರಲ್ಲಿ ಆತಂಕ ತಂದಿದೆ.