ಮನೆ ಬಾಡಿಗೆ ಕಟ್ಟಲೆಂದು ಎತ್ತಿಟ್ಟಿದ್ದ ಹಣವನ್ನು ಒಡವೆ ಖರೀದಿಸಲು ಖರ್ಚು ಮಾಡಿದಳು ಪತ್ನಿ: ಮುಂದಾಗಿದ್ದೇ ದುರಂತ!
Sunday, November 7, 2021
ಬೆಂಗಳೂರು: ಮನೆಯ ಬಾಡಿಗೆ ಕಟ್ಟಲೆಂದು ಎತ್ತಿಟ್ಟಿದ್ದ ಹಣವನ್ನು ಒಡವೆ ಖರೀದಿಸಲು ಖರ್ಚು ಮಾಡಿದ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಪತ್ನಿ ಮೃತಪಟ್ಟಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ನಾಝಿಯಾ ಮೃತಪಟ್ಟ ದುರ್ದೈವಿ. ಆಟೋ ಚಾಲಕ ಪತಿ, ಫಾರೂಕ್ ಬಂಧಿತ ಆರೋಪಿ.
ಬಾಡಿಗೆ ಆಟೋ ಓಡಿಸುತ್ತಿದ್ದ ಫಾರುಕ್ ಹಾಗೂ ಆತನ ಪತ್ನಿ ನಾಝಿಯಾ 2 ವರ್ಷಗಳಿಂದ ದಯಾನಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಾರದ ಹಿಂದೆ ಫಾರುಕ್ ಪತ್ನಿಗೆ ಮನೆ ಬಾಡಿಗೆಗೆಂದು ಇಟ್ಟುಕೊಳ್ಳುವಂತೆ 6,500 ರೂ. ಕೊಟ್ಟಿದ್ದ.
ಆದರೆ ಈ ಹಣವನ್ನು ನಾಝಿಯಾ ಒಂದು ಗ್ರಾಂ ಗೋಲ್ಡ್ ಒಡವೆಗಳನ್ನು ಖರೀದಿಸಿ ಖರ್ಚು ಮಾಡಿದ್ದಳು. ಬಳಿಕ ಆಕೆಯಲ್ಲಿ ಬಾಡಿಗೆ ಹಣ ನೀಡುವಂತೆ ಪತಿ ಫಾರೂಕ್ ತಿಳಿಸಿದಾಗ ಈ ವಿಚಾರ ಆತನಿಗೆ ತಿಳಿದಿದೆ. ಇದರಿಂದ ದಂಪತಿಯ ಮಧ್ಯೆ ವಾಗ್ವಾದ ಬೆಳೆದಿದೆ.
ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ಹೋಗಿ ಫಾರುಕ್, ಪತ್ನಿ ನಾಝಿಯಾಳನ್ನು ಹಲ್ಲೆ ಮಾಡಿ ತಲೆಯನ್ನು ಗೋಡೆಗೆ ಜಜ್ಜಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಪತ್ನಿಯ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾನೆ ಪತಿ ಫಾರೂಕ್. ಆದರೆ ಅಲ್ಲಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದೆ. ಆ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ನಾಝಿಯಾ ಪ್ರಾಣ ಹೋಗಿದೆ.
ಈ ಸಂಬಂಧ ಮೃತ ನಾಝಿಯಾ ಪೋಷಕರು ಫಾರೂಕ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಫಾರೂಕ್ನನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.