
ಹೆಚ್ಚಿನ ಅಂಕ ನೀಡುವೆನೆಂದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕನ ಬಂಧನ
Saturday, November 13, 2021
ಯಾದಗಿರಿ: ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳನ್ನು ನೀಡುವೆನೆಂದು ಆಮಿಷ ಹಾಗೂ ಬೆದರಿಕೆಯೊಡ್ಡಿ ವಸತಿ ನಿಲಯದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಂಡರಗಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಹಯ್ಯಾಳಪ್ಪನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸರಿಯಾದ ಊಟ ಸಿಗದೆ ಕೆಲ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ವಸತಿ ನಿಲಯದ ಅವ್ಯವಸ್ಥೆ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಜಿಲ್ಲಾಧಿಕಾರಿ ಡಾ.ಆರ್. ರಾಗಪ್ರಿಯಾ ಖುದ್ದಾಗಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಸಂದರ್ಭ ಪ್ರಭಾರ ಮುಖ್ಯ ಶಿಕ್ಷಕ ಹಯ್ಯಾಳಪ್ಪನ ಕಾಮುಕತೆ ಬಯಲಾಗಿದೆ.
ಹಯ್ಯಾಳಪ್ಪ ಎಸ್ಎಸ್ಎಲ್ಸಿಯಲ್ಲಿ ಹೆಚ್ಚಿನ ಅಂಕ ನೀಡುವ ಆಮಿಷವೊಡ್ಡಿ, ತನ್ನೊಂದಿಗೆ ಸಹಕರಿಸುವಂತೆ ಬೆದರಿಸುತ್ತಿದ್ದನಂತೆ. ಈತನ ಮಾತು ಕೇಳದಿರುವ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದು, ವಿರೋಧಿಸುತ್ತಿದ್ದ ವಿದ್ಯಾರ್ಥಿನಿಯರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣ ಮಾಡುತ್ತಿದ್ದನಂತೆ.
ಈ ಬಗ್ಗೆ ವಿದ್ಯಾರ್ಥಿಗಳ ಅಳಲು ಆಲಿಸಿರುವ ಜಿಲ್ಲಾಧಿಕಾರಿಗಳು ಕೂಡಲೇ ಪ್ರಾಂಶುಪಾಲನ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.