
ಬಸ್ ಜಾಹಿರಾತಿನಲ್ಲಿದ್ದ ಅಪ್ಪು ಫೋಟೊವನ್ನು ನೋಡಿ ಕಂಬನಿ ಸುರಿಸಿ ಮುತ್ತಿಟ್ಟು, ಸೆರಗಿನಿಂದ ಫೋಟೋ ಮೇಲಿನ ಧೂಳು ಒರೆಸಿದ ಅಜ್ಜಿ: ವೀಡಿಯೋ ವೈರಲ್
Saturday, November 13, 2021
ಕೊಪ್ಪಳ: 'ದೊಡ್ಮನೆ ಹುಡುಗ' ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಅಭಿಮಾನಿಗಳಲ್ಲಿ ಹೇಳತೀರದ ನೋವನ್ನುಂಟು ಮಾಡಿದೆ. ಪರಿಣಾಮ ಕೆಲ ಮಂದಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಕೆಲವರು ಪುನೀತ್ ರಾಜ್‍ಕುಮಾರ್ ರಂತೆ ನೇತ್ರದಾನಕ್ಕೆ ಮನ ಮಾಡಿದವರೂ ಇದ್ದಾರೆ. ಇದೆಲ್ಲವೂ ಅವರ ಮೇಲಿನ ಅಭಿಮಾನದ ದ್ಯೋತಕವೇ ಹೊರತು ಮತ್ತೇನಲ್ಲ.
ಇದೀಗ ವಯೋವೃದ್ಧೆಯೋರ್ವರು ವಿಚಿತ್ರವಾಗಿ ತಮ್ಮ ಅಭಿಮಾನವನ್ನು, ಪುನೀತ್ ಮರಣಕ್ಕೆ ನೋವನ್ನು ವ್ಯಕ್ತಪಡಿಸಿದ್ದು, ಇದರ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಅಜ್ಜಿಯು ಸಾರಿಗೆ ಬಸ್ ನ ಮೇಲೆರುವ ಜಾಹಿರಾತಿನಲ್ಲಿದ್ದ ಪುನೀತ್ ರಾಜ್‍ಕುಮಾರ್ ಫೋಟೊವನ್ನು ಸ್ಪರ್ಶಿಸಿ, ಮುತ್ತಿಟ್ಟು, ಸೆರಗಿನಿಂದ ಅಪ್ಪು ಮುಖ ಸವರಿದ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರೋದು ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ. ಇಲ್ಲಿ ನಿಂತಿರುವ ಸಾರಿಗೆ ಸಂಚಾರಿ ನಿಗಮದ ಬಸ್ ಮೇಲೆ ಜಾಹೀರಾತಿನಲ್ಲಿ ಪುನೀತ್ ರಾಜ್ಕುಮಾರ್ರವರ ಫೋಟೋ ನೋಡಿ ಭಾವುಕರಾದ ಅಜ್ಜಿ, ಆ ಫೋಟೋಗೆ ಮುತ್ತಿಟ್ಟು, ಅದರ ಮೇಲೆ ಕೆಲಹೊತ್ತು ತನ್ನ ತಲೆ ಇಟ್ಟು ನಮಿಸಿದ್ದಾರೆ. ಬಳಿಕ ಅಪ್ಪು ಫೋಟೋ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಸ್ವಚ್ಛಗೊಳಿಸಿದ್ದಾರೆ.
ಈ ದೃಶ್ಯವನ್ನು ಯಾರೋ ದೂರದಿಂದ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಯೋವೃದ್ಧೆ ನೊಂದು ಅಪ್ಪು ಫೋಟೋವನ್ನು ಸೆರಗಿನಿಂದ ಸ್ವಚ್ಚ ಮಾಡುತ್ತಿರುವ ದೃಶ್ಯವನ್ನು ನೋಡಿದರೆ ಮನಕಲಕುತ್ತೆ. ಹೃದಯ ಬಹಳ ಭಾರ ಅನ್ನಿಸುತ್ತದೆ. ಈ ಪ್ರೀತಿ, ಅಭಿಮಾನವನ್ನು ವರ್ಣಿಸುವುದಕ್ಕೆ ಪದಗಳೇ ಸಿಗುತ್ತಿಲ್ಲ.