ನಟ ಪುನೀತ್ ರಾಜ್‍ಕುಮಾರ್ ಸಾವಿನಿಂದ ಖಿನ್ನತೆ: ಆಹಾರ ತ್ಯಜಿಸಿ ಅಪ್ಪು ಅಭಿಮಾನಿ ಸಾವು!
Friday, November 5, 2021
ಚಾಮರಾಜನಗರ: ನಟ ಪುನೀತ್ ರಾಜ್‍ಕುಮಾರ್ ಹಠಾತ್ ಮರಣ ಬಹಳಷ್ಟು ಮಂದಿ ಅಭಿಮಾನಿಗಳನ್ನು ಆಘಾತಕ್ಕೆ ತಳ್ಳಿದೆ. ಪರಿಣಾಮ ದಿನವೂ ಅಭಿಮಾನಿಗಳಿಂದ ಆತ್ಮಹತ್ಯೆ, ಹೃದಯಾಘಾತ ಸಾವಿನ ಸುದ್ದಿಗಳು ಕೇಳಿ ಬರುತ್ತಲೇ ಇದೆ.
ಇದೀಗ ಅಪ್ಪು ಸಾವನ್ನು ಅರಗಿಸಿಕೊಳ್ಳಲಾಗದೆ ಕೊಳ್ಳೇಗಾಲದ ಪುನೀತ್ ಅಪ್ಪಟ ಅಭಿಮಾನಿಯೋರ್ವ ವಾರದಿಂದ ಆಹಾರ ತ್ಯಜಿಸಿ ಇಂದು ಬೆಳಗ್ಗೆ ಮೃತಪಟ್ಟಿರುವ ಘಟನೆ ಹೃದಯವಿದ್ರಾವಕ ಘಟನೆ ನಡೆದಿದೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಭೀಮನಗರ ನಿವಾಸಿ ಶಿವಮೂರ್ತಿ (31) ಮೃತಪಟ್ಟ ಅಪ್ಪು ಅಭಿಮಾನಿ.
ಶಿವಮೂರ್ತಿ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದು ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಪುನೀತ್ ಅವರ ರೀತಿಯೇ ಡ್ಯಾನ್ಸ್, ಸ್ಟೈಲ್, ವಿನಯವನ್ನು ಇವರು ಅನುಕರಣೆ ಮಾಡುತ್ತಿದ್ದರು. ಇದೀಗ ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಹಠಾತ್ ಸಾವು ಅವರನ್ನು ಆಘಾತಕ್ಕೆ ತಳ್ಳಿತ್ತು. ಆ ಬಳಿಕ ಶಿವಮೂರ್ತಿ ಆಹಾರ ಸೇವಿವುದನ್ನೇ ತ್ಯಜಿಸಿದ್ದರು.
ಕಳೆದ ಒಂದು ವಾರದಿಂದ ಆಹಾರ ಸೇವಿಸದೆ ಇದ್ದ ಪರಿಣಾಮ ಶಿವಮೂರ್ತಿಯವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಮನೆಮಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.