ಮದುವೆಯಾಗುವುದಾಗಿ, ನೌಕರಿ ಕೊಡಿಸುವುದಾಗಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನ ವಿರುದ್ಧ ಗಂಭೀರ ಆರೋಪ!
Friday, November 19, 2021
ಜೈಪುರ: ನೌಕರಿ ನೀಡುವುದಾಗಿ, ಮದುವೆಯಾಗುವುದಾಗಿ ಭರವಸೆ ನೀಡಿ, ಕಳೆದ 10 ತಿಂಗಳಿನೊಳಗೆ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪವನ್ನು ಬಿಜೆಪಿ ಶಾಸಕರೋರ್ವರು ಎದುರಿಸುತ್ತಿದ್ದಾರೆ.
ರಾಜಸ್ಥಾನದ ಗೋಗುಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರತಾಪ್ ಭೀಲ್ ವಿರುದ್ಧ ಈ ರೀತಿಯ ಗಂಭೀರ ಆರೋಪ ಕೇಳಿ ಬಂದಿದೆ. ಮೊದಲನೇ ಪ್ರಕರಣದಲ್ಲಿ ನೌಕರಿ ಕೊಡಿಸುವ ಭರವಸೆ ನೀಡಿ ಬಳಿಕ ವಿವಾಹವಾಗುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆಂದು 37 ವರ್ಷದ ಮಹಿಳೆ ದೂರಿದ್ದಾರೆ.
ತನ್ನನ್ನು ವಿವಾಹವಾಗುವುದಾಗಿ ಹೇಳಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆಂದು ಅಂಬಾಮಾತಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಯುವತಿಯೊಬ್ಬಳು ನಿನ್ನೆ ದೂರಿದ್ದಾಳೆ. 10 ತಿಂಗಳ ಹಿಂದೆ ಇದೇ ರೀತಿ ನೌಕರಿ ಕೊಡಿಸುವುದಾಗಿ, ಬಳಿಕ ಮದುವೆಯಾಗುವುದಾಗಿ ಇನ್ನೊಬ್ಬ ಯುವತಿ ದೂರು ದಾಖಲು ಮಾಡಿದ್ದಳು. ಆಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿರುವ ಮಧ್ಯೆಯೇ ಮತ್ತೊಂದು ದೂರು ದಾಖಲಾಗಿದೆ.
'ನೌಕರಿ ಕೊಡಿಸುವಂತೆ ಪ್ರತಾಪ್ ಭೀಲ್ ರನ್ನು ತಾನು ಸಂಪರ್ಕಿಸಿದ್ದೆ. ಅವರು ಕೊಡಿಸುವ ಭರವಸೆ ನೀಡಿದ್ದರು. ಇದೇ ವಿಚಾರವನ್ನು ಮಾತನಾಡಲು ಪದೇ ಪದೇ ಕರೆಯುತ್ತಿದ್ದರು. ನಾನು ಹೋದಾಗಲೆಲ್ಲಾ ಅತ್ಯಾಚಾರ ಮಾಡುತ್ತಿದ್ದರು. ಬಳಿಕ ಮದುವೆಯಾಗುವ ಭರವಸೆ ನೀಡಿದ್ದರು. ನಾನು ನಂಬಿದ್ದೆ. ಪುನಃ ಕರೆಸಿಕೊಂಡು ರೇಪ್ ಮಾಡಿ ಮೋಸ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಆದರೆ ಶಾಸಕ ಪ್ರತಾಪ್ ಭೀಲ್ ಅವರು ತಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ಚುನಾವಣೆ ಶೀಘ್ರದಲ್ಲಿ ಇರುವ ಹಿನ್ನೆಲೆಯಲ್ಲಿ ಈ ರೀತಿ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.