ಟಾಲಿವುಡ್ ಗೆ ಕನ್ನಡತಿ ಸಂಜನಾ ಆನಂದ್ ಪಯಣ: 'ಸಲಗ' ಯಶಸ್ಸಿನ ಬೆನ್ನಿಗೇ ತೆಲುಗು ಸಿನಿಮಾದಲ್ಲಿ ಅವಕಾಶ
Sunday, November 21, 2021
ಬೆಂಗಳೂರು: ‘ಸಲಗ’ ಸಿನಿಮಾ ಯಶಸ್ಸಿನ ಬಳಿಕ ಕನ್ನಡತಿ ಸಂಜನಾ ಆನಂದ್ ಗೆ ಟಾಲಿವುಡ್ ನಿಂದ ಕರೆ ಬಂದಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ತೆಲುಗಿನ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಕಳೆದ ತಿಂಗಳು ಮುಹೂರ್ತ ಮುಗಿಸಿ ಸೆಟ್ಟೇರಿದ್ದರೂ, ಈಗಷ್ಟೇ ಶೂಟಿಂಗ್ ಆರಂಭಿಸಿದೆ.
ಈ ತೆಲುಗು ಸಿನಿಮಾ ಚಿತ್ರೀಕರಣದಲ್ಲಿ ನಟಿ ಸಂಜನಾ ಆನಂದ್ ಭಾಗವಹಿಸಿದ್ದಾರೆ. ಈ ಸಿನಿಮಾವನ್ನು ಖ್ಯಾತ ಚಿತ್ರ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳಾದ ಕೋಡಿ ದಿವ್ಯಾ ದೀಪ್ತಿ ನಿರ್ವಿುಸುತ್ತಿರುವುದು ವಿಶೇಷವಾಗಿದೆ. ಅವರ ಬ್ಯಾನರ್ನಲ್ಲಿ ನಿರ್ವಣವಾಗುತ್ತಿರುವ ಚೊಚ್ಚಲ ತೆಲುಗು ಚಿತ್ರಕ್ಕೆ ನಾಯಕಿಯಾಗಿ ನಟಿ ಸಂಜನಾ ಆಯ್ಕೆಯಾಗಿದ್ದಾರೆ.
‘ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು, ಅಚ್ಚುಕಟ್ಟಾದ ತಂಡದ ಜತೆ ಕೆಲಸ ಮಾಡುವ ಅವಕಾಶ ದೊರಕಿದೆ. ಈ ಹಿಂದೆ ತೆಲುಗಿನಲ್ಲಿ ‘ರಾಜ ವಾರು, ರಾಣಿ ಗಾರು’ ಮತ್ತು ‘ಎಸ್ ಆರ್ ಕಲ್ಯಾಣಮಂಟಪಂ’ ಸಿನಿಮಾದಲ್ಲಿ ಅಭಿನಯಿಸಿದ್ದ ಕಿರಣ್ ಅಬ್ಬಾವರಂ ಈ ಚಿತ್ರದ ನಾಯಕನಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಸಹ ಆರಂಭವಾಗಿದೆ. ಯುವ ನಿರ್ದೇಶಕ ಕಾರ್ತಿಕ್ ಶಂಕರ್ ಈ ಚಿತ್ರದ ನಿರ್ದೇಶಕರಾಗಿದ್ದರೆ' ಎಂದು ಮಾಹಿತಿ ನೀಡುತ್ತಾರೆ ಸಂಜನಾ.
ಈಗಾಗಲೇ ಕನ್ನಡದಿಂದ ಸಾಕಷ್ಟು ನಟಿಯರು ಪರಭಾಷೆಯ ಅಂಗಳಕ್ಕೆ ಹೋಗಿ ಭಾರೀ ಹೆಸರು ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್, ಪೂಜಾ ಹೆಗ್ಡೆ ಸೇರಿ ಹಲವರು ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿಯೂ ಸಕ್ರಿಯರಾಗಿದ್ದಾರೆ. ಆ ಸಾಲಿಗೆ ನಟಿ ಸಂಜನಾ ಆನಂದ್ ಕೂಡಾ ಸೇರಿದ್ದಾರೆ.