
ರಾಜ್ ಕುಂದ್ರಾರಿಗೆ ವಿಚ್ಛೇದನ ಕೊಡುತ್ತಾರಂತೆ ಎಂದ ನೆಟ್ಟಿಗರ ಬಾಯಿ ಮುಚ್ಚಿಸಿದ ನಟಿ ಶಿಲ್ಪಾ ಶೆಟ್ಟಿ
Thursday, November 11, 2021
ಮುಂಬೈ: ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ ನೀಲಿ ಚಿತ್ರ ನಿರ್ಮಾಣ ಹಾಗೂ ಆ್ಯಪ್ ಗಳ ಮೂಲಕ ಅವುಗಳನ್ನು ಬಿಡುಗಡೆ ಮಾಡಿರುವ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆ ಬಳಿಕ ನೆಟ್ಟಿಗರ ಕಣ್ಣು ಶಿಲ್ಪಾ ಶೆಟ್ಟಿಯವರ ಪ್ರತಿಯೊಂದು ನಡೆಯ ಮೇಲೆ ಕಣ್ಣಿಟ್ಟಿದ್ದಾರೆ. ಶಿಲ್ಪಾ ಈ ಬಗ್ಗೆ ಏನೂ ಮಾತನಾಡದಿದ್ದರೂ ಪತಿ ರಾಜ್ ಕುಂದ್ರಾರಿಗೆ ಅವರು ವಿಚ್ಛೇದನ ಕೊಡುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಯಾಗುತ್ತಲೇ ಇತ್ತು.
ರಾಜ್ ಕುಂದ್ರಾ ಜೈಲು ಪಾಲಾದ ಬಳಿಕ ಕೆಲ ವಾರಗಳ ಕಾಲ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ಶಿಲ್ಪಾ ಶೆಟ್ಟಿ ದೂರವೇ ಉಳಿದಿದ್ದರು. ಈ ಮೂಲಕ ಅಭಿಮಾನಿಗಳ ಸಂದೇಹಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿದ್ದರು. ಇದೀಗ ಶಿಲ್ಪಾ ಶೆಟ್ಟಿಯವರು ನೆಟ್ಟಿಗರ ಎಲ್ಲರ ಬಾಯಿಯನ್ನು ತಾವೇ ಮುಚ್ಚಿಸಿದ್ದಾರೆ.
ಇದಕ್ಕೆ ಅವರು ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ್ದಲ್ಲ. ಮೌನವಾಗಿದ್ದುಕೊಂಡೇ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದು ಹೇಗೆ ಎಂದರೆ, ಪತಿ ರಾಜ್ ಕುಂದ್ರಾ ಜೊತೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದ ದೇವಸ್ಥಾನಕ್ಕೆ ತೆರಳಿರುವ ಅವರು, ಆ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ಮೂಲಕ ತಾನು ಪತಿಗೆ ವಿಚ್ಛೇದನ ಕೊಡುತ್ತಿಲ್ಲ, ತಮ್ಮ ದಾಂಪತ್ಯ ಚೆನ್ನಾಗಿಯೇ ಇದೆ. ಹೀಗೆಲ್ಲಾ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಿರಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಂದ ಹಾಗೆ ಬ್ಲೂ ಫಿಲ್ಮ್ಂ ಪ್ರಕರಣದಲ್ಲಿ ಸಿಲುಕಿದ್ದ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈ 19ರಂದು ಬಂಧಿಸಲಾಗಿತ್ತು. ಸೆಪ್ಟೆಂಬರ್ನಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಇದಾದ ಬಳಿಕ ಇದೇ ಮೊದಲ ಬಾರಿಗೆ ದಂಪತಿ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.