
ನಾಲ್ವರು ಯುವತಿಯರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ನಡೆಸಿ ಫಜೀತಿಗೆ ಸಿಲುಕಿಕೊಂಡ 'ಬಂಗಾಳಿ ಸುಂದರ' ಆತ್ಮಹತ್ಯೆಗೆ ಯತ್ನ
Saturday, November 13, 2021
ಕೂಚ್ ಬೆಹಾರ್: ಇಬ್ಬಿಬ್ಬರನ್ನು, ಮೂವರನ್ನು ಪ್ರೀತಿಸಿ ಕೊನೆಗೆ ಪಜೀತಿಗೆ ಸಿಲುಕಿ ಪಾಡು ಪಡುತ್ತಿರುವವರ ಬಗ್ಗೆ ನಾವು ಅನೇಕ ಕಡೆ ಕೇಳುತ್ತಿರುತ್ತೇವೆ. ಕೆಲವೊಂದು ಸಿನಿಮಾಗಳಲ್ಲೂ ಈ ರೀತಿಯ ಕಥೆಗಳನ್ನು ನೋಡಿದ್ದೇವೆ. ಆದರೆ ಪಶ್ಚಿಮ ಬಂಗಾಳದ ಯುವಕನೋರ್ವ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನಾಲ್ವರೊಂದಿಗೆ ಪ್ರೀತಿಯ ನಾಟಕವಾಡಿ ಡೇಟಿಂಗ್ ನಡೆಸಿ ಕೊನೆಗೆ ಫಜೀತಿಗೆ ಸಿಲುಕಿದ್ದಾನೆ.
ಆತ ತನ್ನದೇ ಮನೆಯಲ್ಲಿ ಆ ನಾಲ್ವರು ಯುವತಿಯರ ಕೈಗೆ ಸಿಕ್ಕಿಬಿದ್ದಿದ್ದು, ಅವರೆಲ್ಲರೂ ಸೇರಿ ಆತನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಜೋರ್ ಪಟ್ಕಿ ಗ್ರಾಮದಲ್ಲಿ. ಇಲ್ಲಿನ ಸುಭಾಮೋಯ್ ಕರ್ ಎಂಬ ಯುವಕ ಒಬ್ಬಿಬ್ಬರಲ್ಲ ಏಕಕಾಲದಲ್ಲಿ ಬರೋಬ್ಬರಿ ನಾಲ್ವರು ಯುವತಿಯರೊಂದಿಗೆ ಲವ್ವಿ-ಡವ್ವಿ ಇಟ್ಟುಕೊಂಡಿದ್ದ.
ಅವರಲ್ಲಿ ಯಾರೊಬ್ಬರಿಗೊಬ್ಬರಿಗೂ ಗೊತ್ತಾಗದಂತೆ ನಾಲ್ವರನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದ. ಮೆಡಿಕಲ್ ಸ್ಟೋರೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಭಾಮೋಯ್ ಕರ್ ಗ್ರಹಚಾರ ಕೆಟ್ಟದ್ದರಿಂದ ಈತನ ಬಂಡವಾಳ ನಾಲ್ವರು ಯುವತಿಯರಿಗೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಒಟ್ಟಾಗಿ ಈತನ ಮನೆಗೆ ದಾಳಿ ನಡೆಸಿದ್ದಾರೆ. ತಾನು ಗುಟ್ಟಾಗಿ ಪ್ರೇಮಿಸುತ್ತಿದ್ದ ನಾಲ್ವರು ಒಟ್ಟಾಗಿ ಮನೆಗೆ ಬಂದಿರುವುದನ್ನು ನೋಡಿ ಸುಭಾಮೋಯ್ ಕರ್ ಶಾಕ್ ಆಗಿದ್ದಾನೆ.
ಏನು ಮಾಡಬೇಕೆಂದು ತೋಚದೆ ಕುಳಿತಿರುವಾಗ ಯುವತಿಯರು ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆತ ಏನೇ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಯುವತಿಯರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ತನ್ನ ಕೊಠಡಿಗೆ ತೆರಳಿರುವ ಸುಭಾಮೋಯ್ ಕರ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಗಲಾಟೆ ಕೇಳಿ ಓಡಿಬಂದ ಪಕ್ಕದ ಮನೆಯವರು ಸುಭಾಮೋಯ್ ಕರ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.