
ಮಂಗಳೂರು ಬೆಂಗಳೂರು Sleeper ಬಸ್ ನಲ್ಲಿ ಪಿಯುಸಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ- ಆರೋಪ ಸಾಬೀತು!
Friday, November 26, 2021
ಮಂಗಳೂರು: ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಮಂಗಳೂರು ಬೆಂಗಳೂರು ಸ್ಲೀಪರ್ ಬಸ್ ನಲ್ಲಿ
ಅತ್ಯಾಚಾರ ಎಸಗಿದ ಆರೋಪವು ಸಾಬೀತಾಗಿದ್ದು ನ.27ರಂದು ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.
2014 ರಲ್ಲಿ ಈ ಘಟನೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪಿಯುಸಿ ವಿದ್ಯಾರ್ಥಿನಿ ಯನ್ನು ಬೆಳ್ತಂಗಡಿ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯ ನಿತಿನ್ (27) ಅತ್ಯಾಚಾರ ಗೈದ ಆರೋಪ ಕೇಳಿಬಂದಿತ್ತು.
ಖಾಸಗಿ ಬಸ್ಸಿನ ಕಂಡಕ್ಟರ್ ಆಗಿದ್ದ ನಿತಿನ್ ಕಾರ್ಯ ನಿರ್ವಹಿಸುತ್ತಿದ್ದ ಬಸ್‌ನಲ್ಲಿ ಈ ಬಾಲಕಿ ಕಾಲೇಜಿಗೆ ಹೋಗುತ್ತಿದ್ದಳು. ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಈಕೆಯನ್ನು ಬಸ್ ನಲ್ಲಿ ಪರಿಚಯ ಮಾಡಿಕೊಂಡಿದ್ದ ಆರೋಪಿ 2014 ಜುಲೈ 24ರಂದು ಪುತ್ತೂರಿಗೆ ಬರುವಂತೆ ಹೇಳಿದ್ದನು.ಅದರಂತೆ ಯುವತಿ ಬಂದಾಗ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ರಾತ್ರಿ ವೇಳೆ ಬೆಂಗಳೂರಿಗೆ ಸ್ಲೀಪರ್ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆರೋಪಿಗೆ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ಯಲು ಹಣವಿಲ್ಲದೆ ಇದ್ದಾಗ ಆಕೆಯ ಕಿವಿಯ ಚಿನ್ನಾಭರಣಗಳನ್ನು ಫೈನಾನ್ಸ್ ನಲ್ಲಿ ಅಡವಿಟ್ಟು 2,850 ರೂ. ಪಡೆದು ಬೆಂಗಳೂರಿಗೆ ಬಸ್ ನಲ್ಲಿ ಕರೆದುಕೊಂಡು ಹೋಗಿದ್ದನು.
ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭ ಈತ ಆಕೆಯ ಮೇಲೆ ಸ್ಲೀಪರ್ ಕ್ಯಾಬಿನ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರಿಗೆ ಎರಡು ದಿನ ಆಕೆಯನ್ನು
ಸುತ್ತಾಡಿಸಿದ್ದನು. ಇತ್ತ ಮಗಳು ವಾಪಸ್ ಬರದಿರುವ ಬಗ್ಗೆ ಬಾಲಕಿಯ ಮನೆಯವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ನಿತಿನ್ ವಿದ್ಯಾರ್ಥಿನಿ ಯನ್ನು ಬೆಂಗಳೂರಿಗೆ ಕರೆದುಕೊಂಡು ಹೋದ ಸುಳಿವು ಸಿಕ್ಕಿ ಇವರನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದರು.
ಈ ಬಗ್ಗೆ ಪ್ರಕರಣ ದಾಖಲಾಗಿ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ತನಿಖೆಯನ್ನು ನಡೆಸಿ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಒಂದನೇ ತ್ವರಿತ ಗತಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು ಆರೋಪಿ ಆರೋಪ ಸಾಬೀತಾಗಿದೆ ಎಂದು ತಿಳಿಸಿದ್ದು ನ.27ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿದ್ದಾರೆ.