
ತಂದೆಯೇ ಅಪ್ರಾಪ್ತ ಪುತ್ರಿಗೆ ಬೀಡಿ ಸೇದಲು ಪ್ರಚೋದಿಸಿ ವೀಡಿಯೋ ಚಿತ್ರೀಕರಿಸಿ ವೈರಲ್: ಆರೋಪಿ ವಿರುದ್ಧ ಕ್ರಮಕ್ಕೆ ನೆಟ್ಟಿಗರಿಂದ ಆಗ್ರಹ
Friday, November 12, 2021
ಚಿಕ್ಕಮಗಳೂರು: ತಂದೆಯೇ ಅಪ್ರಾಪ್ತ ಪುತ್ರಿಗೆ ಬೀಡಿ ಸೇದಲು ಪ್ರಚೋದನೆ ಮಾಡಿ ಅದರ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಗುರುವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇದೀಗ ವೈರಲ್ ಆಗಿರುವ ಈ ವೀಡಿಯೋವನ್ನು ನೋಡಿರುವ ನೆಟ್ಟಿಗರು ವ್ಯಕ್ತಿಯ ಕೃತ್ಯವನ್ನು ಖಂಡಿಸಿ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮ ಸಮೀಪದ ಜಾಣಿಗಿ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ತಕ್ಷಣ ಕೃತ್ಯ ಎಸಗಿರುವ ಬಾಲಕಿಯ ತಂದೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಳೆಯುವ ಮಕ್ಕಳ ಮುಂದೆ ಧೂಮಪಾನ, ಮದ್ಯಪಾನವನ್ನು ಮಾಡುವುದೇ ತಪ್ಪು. ಅದರ ಮೇಲೆ ಈ ವ್ಯಕ್ತಿಯು ಹೆತ್ತ ಮಗಳ ಕೈಗೆ ಬೀಡಿ ನೀಡಿ, ಆಕೆ ಬೀಡಿ ಸೇದುತ್ತಿರುವುದನ್ನು ವೀಡಿಯೋ ಚಿತ್ರೀಕರಿಸಿದ್ದಲ್ಲದೇ ಮೂಗಿನಿಂದ ಹೊಗೆ ಬಿಡುವಂತೆ ಪ್ರಚೋದಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿ ತಂದೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹವೂ ಕೇಳಿ ಬರುತ್ತಿದೆ.