
ಮದುವೆಗೆ ಮುನ್ನವೇ ಭಾವೀ ಪತಿಯ ಹಿಂಸೆ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಯುವತಿ: ಅಷ್ಟಕ್ಕೂ ಆಗಿದ್ದೇನು
Saturday, November 13, 2021
ಹುಬ್ಬಳ್ಳಿ: ಒಂದೂವರೆ ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೋರ್ವಳು ಭಾವೀ ಪತಿಯ ಕಿರುಕುಳ ಸಹಿಸಲಾಗದೆ ಮದುವೆಗೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಕೆಯ ಮನೆಯಲ್ಲಿ ಮದುವೆಯ ಸಂಭ್ರಮ ನೆಲೆಸಬೇಕಿತ್ತು. ಆದರೆ ವಿಧಿಯ ಕೈವಾಡ ಬೇರೆಯೇ ಇತ್ತು. ಇದೀಗ ಹಸೆಮಣೆ ಏರಬೇಕಿದ್ದ ಮಗಳು ಮಸಣದತ್ತ ಪ್ರಯಾಣಿಸಿದ್ದು, ಮನೆ ಪೂರ್ತಿ ಶೋಕ ಆವರಿಸಿದೆ.
ಹುಬ್ಬಳ್ಳಿ ನಿವಾಸಿ ಪವಿತ್ರಾ(25) ಆತ್ಮಹತ್ಯೆಗೈದ ಯುವತಿ. ಈಕೆಗೆ ಸೆ.1ರಂದು ಹಾವೇರಿಯ ಅಭಿನಂದನ್ ಎಂಬಾತನೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು.
ಕಳೆದ ವಾರ ಪವಿತ್ರಾಳನ್ನು ಮದುವೆ ಹುಡುಗ ಅಭಿನಂದನ್ ಪ್ರೀ ವೆಡ್ಡಿಂಗ್ ಫೋಟೊ ಶೂಟಿಂಗ್ಗೆಂದು ದಾಂಡೇಲಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ವಾಪಸ್ ಬಂದ ಬಳಿಕ ಅಭಿನಂದನ್ ನಲ್ಲಿ ಬದಲಾವಣೆ ಕಾಣಲಾರಂಭಿಸಿದೆ. ಆತ ಭಾವಿ ಪತ್ನಿಯ ನಡತೆಯ ಸಂಶಯ ವ್ಯಕ್ತಪಡಿಸಲು ಆರಂಭಿಸಿದ್ದಾನೆ. ಆದ್ದರಿಂದ ಆ ಬಳಿಕದಿಂದ ಅಭಿನಂದನ್ ಭಾವೀ ಪತ್ನಿ ಪವಿತ್ರಾಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ. ಇದರಿಂದ ಮನನೊಂದು ಯುವತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಪ್ರೀ ವೆಡ್ಡಿಂಗ್ ಫೋಟೋ ಶೂಟಿಂಗ್ ವೇಳೆ ಏನಾಗಿದೆ? ಆತ ಭಾವಿ ಪತ್ನಿ ಮೇಲೆಯೇ ಅನುಮಾನ ಪಟ್ಟಿದ್ದೇಕೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಹುಬ್ಬಳ್ಳಿಯ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.