![ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ 'ವಿಕ್ರಾಂತ್ ರೋಣ' ಸುಂದರಿಯ ಡೇಟಿಂಗ್'?: ಇಬ್ಬರ ಚುಂಬನದ ಫೋಟೋ ವೈರಲ್ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ 'ವಿಕ್ರಾಂತ್ ರೋಣ' ಸುಂದರಿಯ ಡೇಟಿಂಗ್'?: ಇಬ್ಬರ ಚುಂಬನದ ಫೋಟೋ ವೈರಲ್](https://blogger.googleusercontent.com/img/b/R29vZ2xl/AVvXsEjUQDy168Ko48c_O1KtkGgbSzBdHxzIRyYBqzLky2etCU0f3eEqGLxcaFz_Hor93z2buGfac0cypUPE-TWmVnqRa9mVZ7q5niaQWaIMVsHLzS6cvpkZwZVVk22H3yqeBPGVZUmp-WJr4IC4/s1600/1638029551528361-0.png)
ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ 'ವಿಕ್ರಾಂತ್ ರೋಣ' ಸುಂದರಿಯ ಡೇಟಿಂಗ್'?: ಇಬ್ಬರ ಚುಂಬನದ ಫೋಟೋ ವೈರಲ್
Saturday, November 27, 2021
ಮುಂಬೈ: ವಿಕ್ರಾಂತ್ ರೋಣಕ್ಕೆ ಸಖತ್ ಸ್ಟೆಪ್ ಹಾಕಿರುವ ಸುಂದರಿ, ಶ್ರೀಲಂಕಾದ ಮಿಸ್ ಯುನಿವರ್ಸ್ ಆಗಿರುವ ಜಾಕ್ವೆಲಿನ್ ಫೆರ್ನಾಂಡಿಸ್ ಬಾಲಿವುಡ್ ಹಾಗೂ ದಕ್ಷಿಣದ ಚಿತ್ರರಂಗದಲ್ಲಿಯೂ ಬಹುಬೇಡಿಕೆಯ ನಟಿ ಎಂದರೆ ತಪ್ಪಿಲ್ಲ.
ನಟ ಸುದೀಪ್ ಜೊತೆ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಫೆರ್ನಾಂಡಿಸ್ ಕನ್ನಡ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಸಿನಿಮಾ. ಆದರೆ ಕಳೆದ ಎರಡು ದಿನಗಳಿಂದ ಜಾಕ್ವೆಲಿನ್ ಫೆರ್ನಾಂಡಿಸ್ ವಿವಾದವೊಂದರಲ್ಲಿ ಸಿಲುಕಿದ್ದಾರೆ.
ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನೆಂದರೆ ಜಾಕ್ವೆಲಿನ್ ಫೆರ್ನಾಂಡಿಸ್ ವಂಚಕನೆಂದು ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೌದು, ಈ ಬಗ್ಗೆ ಒಂದು ವೈರಲ್ ಫೋಟೋ ಎನ್ನಲಾಗಿದೆ. ಅದುವೇ ನಟಿ ಜಾಕ್ವೆಲಿನ್ ಕೆನ್ನೆಗೆ ಸುಕೇಶ್ ಚಂದ್ರಶೇಖರ್ ಮುತ್ತಿಟ್ಟ ಫೋಟೋ. ಸದ್ಯ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಈ ಫೋಟೊದ್ದೇ ಹವಾ.
ಅಂದಹಾಗೆ, ಸುಕೇಶ್ ಚಂದ್ರಶೇಖರ್ ಹಲವು ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಹಾಗೂ ಉದ್ಯಮಿಗಳಿಗೆ ಬೆದರಿಕೆ ಒಡ್ಡಿ ಕೋಟಿ ಕೋಟಿ ರೂ. ಸುಲಿಗೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಇದೀಗ ಸುಕೇಶ್ ಚಂದ್ರಶೇಖರ್ ವಿಕ್ರಾಂತ್ ರೋಣ ಸುಂದರಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನಂತೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಸುಕೇಶ್ ಜೈಲು ಸೇರಿದ್ದಾಗ ಕೂಡಾ ಸುಕೇಶ್ ಜೊತೆ ನಟಿ ಡೇಟಿಂಗ್ ಮಾಡ್ತಿರೋದಾಗಿ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗಳನ್ನು ಜಾಕ್ವೆಲಿನ್ ನಿರಾಕರಿಸಿದ್ದರು. ಅಷ್ಟರಲ್ಲಿ ಈ ಪೋಟೋ ಮತ್ತೆ ನಟಿಯನ್ನು ಸಂಕಷ್ಟಕ್ಕೆ ದೂಡಿದೆ.
ಆದರೆ ಈ ವಂಚಕನ ಬಲೆಗೆ ಜಾಕ್ವೆಲಿನ್ ಬಿದ್ದಿದ್ಹೇಗೆ? ಸುಕೇಶ್ ಚಂದ್ರಶೇಖರ್ ಆರಂಭದಲ್ಲಿ ತಾನು ಪ್ರಭಾವಿ, ದೊಡ್ಡ ವ್ಯಕ್ತಿಯೆಂದು ನಂಬಿಸಿದ್ದನಂತೆ. ಬಳಿಕ ನಟಿಗೆ ದುಬಾರಿ ಉಡುಗೊರೆಗಳನ್ನು ಕಳಿಸ್ತಿದ್ದನಂತೆ. ಇನ್ನು ವಂಚನೆ ಪ್ರಕರಣದಿಂದ ತಿಹಾರ್ ಜೈಲಿನಲ್ಲಿದ್ದ ಸುಕೇಶ್ ಜೂನ್ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದು, ಅದರ ಬಳಿಕವೂ ಜಾಕ್ವೆಲಿನ್ನ ನಾಲ್ಕು – ಐದು ಬಾರಿ ಭೇಟಿಯಾಗಿದ್ದಾರೆಂದು ಹೇಳಲಾಗಿದೆ.
ಅಲ್ಲದೆ ಜೈಲಿನಲ್ಲಿದ್ದುಕೊಂಡೇ ಸುಕೇಶ್ ಹಾಗೂ ಜಾಕ್ವೆಲಿನ್ ಫೋನ್ ಸಂಪರ್ಕದಲ್ಲಿದ್ದರು ಎಂದು ಹಲವು ಮೂಲಗಳಿಂದ ಮಾಹಿತಿ ಇದೆ. ಒಟ್ಟಿನಲ್ಲಿ, 200 ಕೋಟಿ ರೂ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆ ನಡೆಯುತ್ತಿದ್ದು, ನಟಿ ಜಾಕ್ವೆಲಿನ್ ಮತ್ತು ಸುಕೇಶ್ ನಡುವೆ ಯಾವುದಾದರೂ ಹಣದ ವಹಿವಾಟು ನಡೆದಿದೆಯೇ ಅಂತ ಇ.ಡಿ. ಶೋಧಿಸುತ್ತಿದೆ. ಇಂತಹ ಸಮಯದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಮತ್ತೆ ನಟಿಯನ್ನು ಅದೆಷ್ಟು ಸಂಕಷ್ಟಕ್ಕೆ ದೂಡಲಿದೆಯೋ ಕಾದು ನೋಡಬೇಕಷ್ಟೇ.