ಮಂಗಳೂರು: ಬಸ್ ನಲ್ಲಿ ಸಹೋದರಿಯರ ವೀಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿರುವ ಕಾಮುಕನಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಪ್ರಯಾಣಿಕರು
Wednesday, November 3, 2021
ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಹೋದರಿಯರ ವೀಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಕಾಮುಕನಿಗೆ ಪ್ರಯಾಣಿಕರೇ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಇಂದು ಮಂಗಳೂರಿನ ಜಪ್ಪಿನಮೊಗರುವಿನಲ್ಲಿ ನಡೆದಿದೆ.
ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎಂಬಾತ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿರುವ ಆರೋಪಿ.
ಆರೋಪಿ ತಲಪಾಡಿಯ 42 ರೂಟ್ ಸಂಖ್ಯೆಯ ಸಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ. ಬಸ್ ತಲಪಾಡಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಈತ ಕೃತ್ಯ ಎಸಗಿದ್ದಾನೆ. ಆರೋಪಿ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದಾನೆ. ಬಳಿಕ ಬಸ್ಸಿನಲ್ಲಿ ಚಾಲಕನ ಹತ್ತಿರದ ಕ್ಯಾಬಿನ್ ಸೀಟಲ್ಲಿ ಕುಳಿತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ತನ್ನ ಮೊಬೈಲ್ ಫೋನಲ್ಲಿ ಚಿತ್ರೀಕರಿಸಿದ್ದಾನೆ.
ಇದನ್ನು ಬೇರೊಬ್ಬ ಪ್ರಯಾಣಿಕನು ಗಮನಿಸಿದ್ದಾನೆ. ಆತ ಈ ವಿಚಾರವನ್ನು ಸಹೋದರಿಯರ ಗಮನಕ್ಕೆ ತಂದಿದ್ದಾನೆ. ತಕ್ಷಣ ಬಸ್ ನಲ್ಲಿದ್ದ ಪ್ರಯಾಣಿಕರು ಈ ವಿಕೃತ ಕಾಮುಕನನ್ನು ತರಾಟೆಗೆತ್ತಿಕೊಂಡಿದ್ದಾರೆ. ಅಲ್ಲದೆ ಜಪ್ಪಿನಮೊಗರು ಎಂಬಲ್ಲಿ ಬಸ್ ನಿಂದ ಇಳಿಸಿ ಧರ್ಮದೇಟು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ವಿಕೃತಕಾಮಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.