ತಿಮಿಂಗಿಲ ವಾಂತಿ ಪತ್ತೆ ಪ್ರಕರಣಕ್ಕೆ ಮತ್ತೊಂದು ತಿರುವು: ಒಬ್ಬನೇ ಆರೋಪಿ ಮನೆಯಲ್ಲಿ ದೊರಕಿದೆ 10 ಕೆಜಿ ತಿಮಿಂಗಿಲ ವಾಂತಿ, ಇದರ ಮೌಲ್ಯವೆಷ್ಟು ಗೊತ್ತೇ?
Saturday, December 25, 2021
ಹೊಸಪೇಟೆ: ವಿಜಯನಗರದ ಹೊಸಪೇಟೆಯಲ್ಲಿ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡಿರುವ 1.50 ಕೋಟಿ ರೂ. ಬೆಲೆಬಾಳುವ ತಿಮಿಂಗಿಲ ವಾಂತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಮಾಹಿತಿಯೊಂದು ದೊರಕಿದೆ.
ವಿಶೇಷವೆಂದರೆ ಓರ್ವನೇ ಆರೋಪಿಯ ಮನೆಯಲ್ಲಿ 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ಪತ್ತೆಯಾಗಿರುವುದು ಪ್ರಕರಣದ ಬಗ್ಗೆ ಇನ್ನೂ ಕುತೂಹಲವನ್ನು ಹೆಚ್ಚಿಸಿದೆ.
ಡಿ.22ರಂದು ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ಆರು ಮಂದಿ ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸಿದ್ದರು. ಅವರಿಂದ 1.50 ಕೋಟಿ ರೂ. ಬೆಲೆಬಾಳುವ ಆ್ಯಂಬರ್ ಗ್ರೀಸ್(ತಿಮಿಂಗಿಲ ವಾಂತಿ) ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ವೆಂಕಟೇಶ್ ನಾಯ್ಕ್, ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ್, ಮಹೇಶ್ ಹಾಗೂ ವಿಜಯಪುರದ ಶ್ರೀಧರ್ ಬಂಧಿತ ಆರೋಪಿಗಳು.
ಆರೋಪಿಗಳನ್ನು ಇದೀಗ ನ್ಯಾಯಾಂಗ ಬಂಧನವಾಗಿದೆ. ಈ ಪೈಕಿ ಅನುಮಾನಗೊಂಡ ಪೊಲೀಸರು ಆರೋಪಿ ಭಟ್ಕಳದ ಗಣಪತಿ ಎಂಬಾತನನ್ನು ಮತ್ತೆ ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದರು. ಆಗ ಮುರುಡೇಶ್ವರದಲ್ಲಿರುವ ಆತನ ಮನೆಯಲ್ಲಿ ಮತ್ತೆ 10 ಕೆ.ಜಿ. ತಿಮಿಂಗಲ ವಾಂತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 10 ಕೋಟಿ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.
ಗಣಪತಿ ತನ್ನ ಮನೆಯಲ್ಲಿ ದಾಸ್ತಾನಿಟ್ಟಿದ್ದ ತಿಮಿಂಗಿಲ ವಾಂತಿ ಪೈಕಿ 1.50 ಕೆ.ಜಿ.ಯಷ್ಟನ್ನು ಹೊಸಪೇಟೆಯಲ್ಲಿ ಮಾರಾಟಕ್ಕೆ ಯತ್ನಿಸಿದಾಗ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದರು.