ಸುಳ್ಳು ಅತ್ಯಾಚಾರ ಕೇಸು ದಾಖಲಿಸಿದ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
Friday, December 24, 2021
ರಾಜ್‌ಗಢ (ಮಧ್ಯಪ್ರದೇಶ): ದೇಶದಲ್ಲಿ ಈಚಿನ ವರ್ಷಗಳಲ್ಲಿ ಮಹಿಳೆಯರ ಪರವಾಗಿಯೇ ಕೆಲವೊಂದು ಹಲವಾರು ಕಾನೂನುಗಳಿವೆ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಕೆಲ ಮಹಿಳೆಯರು ಇಂತಹ ಕಾನೂನುಗಳನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಗಳು ಕೇಳಿ ಬರುತ್ತಲೇ ಇದೆ.
ಅತ್ಯಾಚಾರ, ವರದಕ್ಷಿಣೆ ಕಿರುಕುಳದಂಥ ಕೆಲವು ಮಹಿಳಾ ಪರವಾಗಿ ಇರುವ ಕಾನೂನುಗಳನ್ನು ಕೆಲವು ಮಹಿಳೆಯರು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ನಡೆಯುತ್ತಲೇ ಇವೆ. ಇಂಥದ್ದೇ ಪ್ರಕರಣವೊಂದರಲ್ಲಿ ನಾಲ್ವರ ವಿರುದ್ಧ ಸುಳ್ಳು ರೇಪ್ ಕೇಸ್ ಹಾಕಿ, ಅವರೆಲ್ಲರೂ ವರ್ಷಾನುಗಟ್ಟಲೆ ಕೋರ್ಟ್ ಕಚೇರಿಯೆಂದು ಅಲೆದಾಡುವಂತೆ ಮಾಡಿರುವ ಮಹಿಳೆಯೊಬ್ಬಳಿಗೆ ಮಧ್ಯಪ್ರದೇಶ ಕೋರ್ಟ್ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
2008ರಲ್ಲಿ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಜೀರಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 38 ವರ್ಷದ ಮಹಿಳೆಯೋರ್ವಳು ನಾಲ್ವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ ನಾಲ್ವರನ್ನು ಬಂಧಿಸಿದ್ದರು. ಬಳಿಕ ಪ್ರಕರಣ ವಿಚಾರಣೆಯು ವರ್ಷಾನುಗಟ್ಟಲೆ ನಡೆದು ನಾಲ್ವರು ಆರೋಪಿಗಳು ಜೈಲು ಸೇರಿದ್ದರು. ಆಗ ನಾಲ್ವರು ಆರೋಪಿಗಳು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ.
ಅದರಲ್ಲೂ ಅತ್ಯಾಚಾರದಂಥ ಪ್ರಕರಣಗಳು ದಾಖಲಾಗಿರುವ ಆರೋಪಿಗಳನ್ನು ವಿಚಾರಣೆ ಮಾಡುವ ಪರಿಯೇ ಕಠೋರವೂ ಆಗಿರುತ್ತದೆ. ಆದರೆ ಪೊಲೀಸರಿಗೆ ತನಿಖೆಯಲ್ಲಿ ಈ ಆರೋಪಿಗಳ ತಪ್ಪಿಲ್ಲ ಎಂದು ತಿಳಿದುಬಂದಿತ್ತು. ಬಳಿಕ ಮಹಿಳೆಯನ್ನು ಪೊಲೀಸ್ ಭಾಷೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾಗ ಸತ್ಯ ಹೊರ ಬಂದಿದೆ.
ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆ ನಾಲ್ವರ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಹೇಳಿದ್ದಳು. ಬಳಿಕ ತನ್ನ ಕೇಸನ್ನಜ ವಾಪಸ್ ತೆಗೆದುಕೊಂಡಿದ್ದಳು. ಆದರೆ ಅದಾಗಲೇ ಈ ಆರೋಪಿಗಳು ಜೈಲು ಸೇರಿದ್ದರು. ಮಹಿಳೆಯ ಹೇಳಿಕೆಯ ಬಳಿಕ ಆರೋಪಿಗಳೆಂದು ಜೈಲು ಸೇರಿದ್ದ ನಾಲ್ವರು ಬಿಡುಗಡೆಗೊಂಡಿದ್ದರು.
ಜೈಲಿನಿಂದ ಬಿಡುಗಡೆಯಾದ ನಾಲ್ವರೂ ಮಹಿಳೆಯ ವಿರುದ್ಧ ಕೇಸ್ ದಾಖಲು ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ವಿಚಾರಣೆ ನಡೆಸಿ ಮಹಿಳೆಯ ಆರೋಪ ಸಾಬೀತಾಗಿದ್ದು, ಕೋರ್ಟ್ ಆಕೆಗೆ 10 ವರ್ಷಗಳ ಕಠಿಣ ಸಜೆ ಮತ್ತು 2 ಸಾವಿರ ರೂ. ದಂಡವನ್ನು ವಿಧಿಸಿದೆ.