-->
ಅಪ್ರಾಪ್ತ ನಾದಿನಿಯನ್ನೇ ನಿರಂತರ ಅತ್ಯಾಚಾರವೆಸಗಿದ ಅಪರಾಧಿಗೆ 10 ವರ್ಷ ಕಠಿಣ ಸಜೆ, ದಂಡ

ಅಪ್ರಾಪ್ತ ನಾದಿನಿಯನ್ನೇ ನಿರಂತರ ಅತ್ಯಾಚಾರವೆಸಗಿದ ಅಪರಾಧಿಗೆ 10 ವರ್ಷ ಕಠಿಣ ಸಜೆ, ದಂಡ

ಕುಂದಾಪುರ: ಅಪ್ರಾಪ್ತ ವಯಸ್ಸಿನ ನಾದಿನಿಯ ಮೇಲೆ ನಿರಂತರವಾಗಿ ಅತ್ಯಾಚಾರಗೈದಿರುವ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಸುರೇಶ್ ಮರಾಠಿ (29) ‌ಪತ್ನಿಯ ಅಪ್ರಾಪ್ತ ತಂಗಿಯಾದ ನಾದಿನಿಯನ್ನೇ ಅತ್ಯಾಚಾರಗೈದಿರುವ ಅಪರಾಧಿ.

ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಈ ಘಟನೆ ನಡೆದಿತ್ತು. ಅಪರಾಧಿ ಸುರೇಶ್ ಮರಾಠಿ ತನ್ನ ಪತ್ನಿಯ 17 ವರ್ಷದ ಅಪ್ರಾಪ್ತ ತಂಗಿಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಮರವೊಂದರ ಮೇಲೆ ಗುಡಿಸಲು ನಿರ್ಮಿಸಿ ಆಕೆಯ ಮೇಲೆ ನಿರಂತರವಾಗಿ ಮೂರು‌ ದಿನಗಳ ಕಾಲ ಅತ್ಯಾಚಾರ ನಡೆಸಿದ್ದಾನೆ. 

ಸಂತ್ರಸ್ತೆ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಸುರೇಶ್ ಮರಾಠಿಯನ್ನು ಬಂಧಿಸಿದ ಬಳಿಕ ವಿಚಾರಣೆಗಾಗಿ‌ 2018ರ ಅಕ್ಟೋಬರ್ ನಲ್ಲಿ ಉಡುಪಿ ಪೊಕ್ಸೊ ನ್ಯಾಯಾಲಯಕ್ಕೆ ಕರೆತರಲಾಗಿತ್ತು‌. ಅಲ್ಲಿಂದ ರೈಲಿನಲ್ಲಿ ವಾಪಸ್ ಕಾರಾವರ ಜೈಲಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಬೈಂದೂರು ರೈಲು ನಿಲ್ದಾಣದ ಬಳಿ ಆರೋಪಿ ತನಗೆ ವಾಂತಿ ಬರುತ್ತಿದೆಯೆಂದು ನಾಟಕವಾಡಿದ್ದಾನೆ. ಬಳಿಕ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ಇಬ್ಬರು ಪೊಲೀಸರನ್ನು ಅಂದಿನ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಅಮಾನತುಗೊಳಿಸಿದ್ದರು. ಅಂದಾಜು 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಕಳೆದ ಆರೇಳು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಶರಣಾಗತನಾಗಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರಿನ ಅಂದಿನ ಸಿಪಿಐ ಪರಮೇಶ್ವರ ಗುನಗ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯ ಒಟ್ಟು 25 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 15 ಮಂದಿ ವಿಚಾರಣೆ ನಡೆಸಿತ್ತು. ಸಂತ್ರಸ್ತೆಯ ಸಹಿತ ಪ್ರಮುಖ ಸಾಕ್ಷಿಗಳು‌ ಅಭಿಯೋಜನೆಗೆ ವಿರುದ್ಧವಾಗಿತ್ತು. 

ಆದರೆ‌ ವೈದ್ಯಕೀಯ ಸಾಕ್ಷಿ, ತನಿಖಾಧಿಕಾರಿ‌ ನ್ಯಾಯಾಲಯದಲ್ಲಿ ನುಡಿದಿರುವ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಸುರೇಶ್ ಮರಾಠಿ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಅಲ್ಲದೆ ವಿಚಾರಣಾಧೀನ ಕೈದಿಯಾಗಿದ್ದಾಗ ಆರೋಪಿ ಪರಾರಿಯಾಗಿದ್ದು ಪ್ರಮುಖ ಸಾಕ್ಷಿಗಳ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದ್ದು ಅದರಿಂದಲೇ‌ ಪ್ರಮುಖ ಸಾಕ್ಷಿದಾರರು‌ ಪ್ರಾಸಿಕ್ಯೂಶನ್ ವಿರುದ್ಧ ಸಾಕ್ಷಿ ನುಡಿದಿರಬಹುದೆಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ ಅವರು ಅಪರಾಧಿಗೆ 10 ವರ್ಷ ಕಠಿಣ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ‌ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.  

ಉಡುಪಿಯ ಪೊಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article