11 ಮಂದಿ ವೈದ್ಯರ ತಂಡ ಮೃತಪಟ್ಟನೆಂದು ಘೋಷಿಸಿದರೂ, ಮರಳಿ ಬದುಕಿ ಬಂದ ವೃದ್ಧ!
Tuesday, December 28, 2021
ನವದೆಹಲಿ: ಕೆಲವೊಮ್ಮೆ ವಿಜ್ಞಾನ ಹಾಗೂ ವೈದ್ಯಕೀಯ ಲೋಕಕ್ಕೇ ಸವಾಲೊಡ್ಡುವ ಘಟನೆಗಳು ನಡೆಯುತ್ತಿರುತ್ತದೆ. ರೋಗಿಯೋರ್ವನು ಮೃತಪಟ್ಟಿದ್ದಾನೆಂದು ವೈದ್ಯರು ಘೋಷಣೆ ಮಾಡಿದ ಬಳಿಕ ಕೆಲವರು ಬದುಕಿ ಬಂದಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಅಂಥಹದ್ದೇ ಒಂದು ಕುತೂಹಲಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬುವರೊಬ್ಬರು ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಬಾಯಿಗೆ ಗಂಗಾಜಲ ಹಾಕುತ್ತಿದ್ದ ಸಂದರ್ಭ ಕಣ್ಣುತೆರೆದು ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಕುಟುಂಬಸ್ಥರು, ಅಲ್ಲಿದ್ದವರೆಲ್ಲರೂ ಹೌಹಾರಿ ಹೋಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ ರಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ಭಾನುವಾರ 11 ಮಂದಿ ತಜ್ಞ ವೈದ್ಯರ ತಂಡ ಸರ್ಟಿಫಿಕೇಟ್ ಕೊಟ್ಟಿದ್ದರು. ಸತೀಶ್ ಭಾರಧ್ವಜ್ ರನ್ನು ಕಳೆದುಕೊಂಡ ಕುಟುಂಬಸ್ಥರು ದುಃಖತಪ್ತರಾಗಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಸಲೆಂದು ಟಿಕ್ರಿ ಖುರ್ದ್ ಪ್ರದೇಶದಲ್ಲಿರುವ ಸ್ಮಶಾನಕ್ಕೆ ಹೋಗಿದ್ದಾರೆ. ಕೊನೆಯ ವಿಧಿವಿಧಾನದಂತೆ ಅವರ ಬಾಯಿಗೆ ಗಂಗಾಜಲ ಬಿಡಲಾಗಿದೆ. ಗಂಗಾಜಲ ಬಾಯಿಯೊಳಗೆ ಹೋಗುತ್ತಿದ್ದಂತೆಯೇ ಅವರು ಕಣ್ತೆರೆದು ಮಾತನಾಡಲು ಆರಂಭಿಸಿದ್ದಾರೆ.
ಇದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆ್ಯಂಬುಲೆನ್ಸ್ ಮೂಲಕ ಭಾರದ್ವಾಜ್ ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ತಪಾಸಣೆ ಮಾಡಿದ ವೈದ್ಯರು ಭಾರದ್ವಾಜ್ ರಕ್ತದೊತ್ತಡ, ಹೃದಯ ಬಡಿತ, ನಾಡಿ ಮಿಡಿತದ ವರದಿ ನಾರ್ಮಲ್ ಇದೆ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.