ಪತನಗೊಂಡು ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್: 12 ಗಂಟೆಗಳ ಕಾಲ ಈಜಿ ದಡ ಸೇರಿದ ಸಚಿವ
Thursday, December 23, 2021
ಅಂಟಾನನಾರಿಯೊ: ಹೆಲಿಕಾಪ್ಟರ್ ಪತನಗೊಂಡು ಸಮುದ್ರಕ್ಕೆ ಬಿದ್ದಿರುವ ಪ್ರಕರಣವೊಂದರಲ್ಲಿ ಮಡಗಾಸ್ಕರ್ ದೇಶದ ಸಚಿವರೊಬ್ಬರು ಸುಮಾರು 12 ಗಂಟೆಗಳ ಈಜಿ ದಡ ಸೇರಿದ ಅಚ್ಚರಿಯ ಸುದ್ದಿಯೊಂದು ವರದಿಯಾಗಿದೆ.
ಮಡಗಾಸ್ಕರ್ ದೇಶದ ಈಶಾನ್ಯ ಕರಾವಳಿಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಸಮುದ್ರಕ್ಕೆ ಬಿದ್ದಿತ್ತು. ವಿಮಾನದಲ್ಲಿದ್ದ ಪೊಲೀಸ್ ಇಲಾಖೆಯ ಸಹಾಯಕ ಸಚಿವ ಸೆರ್ಗೆ ಗೆಲೆ ಹಾಗೂ ಓರ್ವ ಪೊಲೀಸ್ ಸಿಬಂದಿ ಸಮುದ್ರದಲ್ಲಿ ಈಜಿ ದಡ ಸೇರಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಇತರ ಈರ್ವರು ಪ್ರಯಾಣಿಕರು ನಾಪತ್ತೆಯಾಗಿದ್ದು, ಇವರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣವಿನ್ನೂ ಸ್ಫಷ್ಟವಾಗಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೆಲಿಕಾಪ್ಟರ್‌ನ ಸೀಟನ್ನು ಮುರಿದು ಅದನ್ನೇ ಈಜುಸಾಧನವಾಗಿ ಬಳಸಿಕೊಂಡು ಸಚಿವರು ಪಾರಾಗಿದ್ದಾರೆ. ಈಶಾನ್ಯ ತೀರದ ಬಳಿ ಹಡಗೊಂದು ಅಪಘಾತಗೊಂಡಿತ್ತು. ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಚಿವರು ಪೊಲೀಸರೊಂದಿಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.