ಹಾವುಗಳು ಸುಳಿಯದಂತೆ ಮಾಡಲು ಹೋಗಿ ಇಡೀ ಮನೆ ಮುಂಭಾಗ ಬೆಂಕಿ ಹಾಕಿದ ಅಸಾಮಿ: 13.50 ಕೋಟಿ ರೂ. ಬಂಗಲೆ ಸಂಪೂರ್ಣ ಸುಟ್ಟು ಭಸ್ಮ
Thursday, December 9, 2021
ವಾಷಿಂಗ್ಟನ್: ನಿವಾಸಕ್ಕೆ ಪದೇ ಪದೇ ಬರುತ್ತಿರುವ ಹಾವಿನಿಂದ ರೋಸಿ ವ್ಯಕ್ತಿಯೋರ್ವನು ಅದು ಸುಳಿಯದಂತೆ ಬುದ್ಧಿ ಕಲಿಸಲು ತನ್ನ ಬೆಲೆಬಾಳುವ ಬಂಗಲೆಯನ್ನೇ ಸುಟ್ಟು ಹಾಕಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್‍ನಲ್ಲಿ ನಡೆದಿದೆ.
ಪದೇ ಪದೇ ಬರುತ್ತಿರುವ ಹಾವುಗಳಿಗೆ ಬುದ್ಧಿಕಲಿಸಲು ಹೊರಟು ಸುಮಾರು 1.8 ಮಿಲಿಯನ್ (13.50 ಕೋಟಿ ರೂ.) ಬೆಲೆಬಾಳುವ ಬಂಗಲೆಯೊಂದಿಗೆ ಸಾಮಗ್ರಿಗಳನ್ನು ಆತ ಕಳೆದುಕೊಂಡಿದ್ದಾನೆ. ಈತ 13.50 ಕೋಟಿ ರೂ. ಕೊಟ್ಟು ಬಂಗಲೆಯನ್ನು ಖರೀದಿ ಮಾಡಿದ್ದ. ಆದರೆ ಆತನ ನಿವಾಸದ ಬಳಿ ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಬಹುತೇಕರು ಈ ಬಂಗಲೆಯನ್ನು ಖರೀದಿ ಮಾಡಲು ಹಿಂಜರಿದಿದ್ದರು. ಈ ಅಸಾಮಿ ಮಾತ್ರ ತನಗೆ ಹಾವುಗಳನ್ನು ಓಡಿಸುವುದು ಗೊತ್ತು ಎಂದು ಹೇಳುವ ಮೂಲಕ ಕಡಿಮೆ ಬೆಲೆಗೆ (ಬಂಗಲೆ ಬೆಲೆ 25 ಕೋಟಿ ರೂ.ಗೂ ಅಧಿಕವಿದೆ ಎನ್ನಲಾಗುತ್ತಿದೆ) ಬಂಗಲೆ ಖರೀದಿಸಿದ್ದ.
ಬಳಿಕ ಅಲ್ಲಿ ಹಾವುಗಳು ಕಾಣಿಸಿಕೊಳ್ಳಲು ಆರಂಭವಾದಾಗ ಒಂದಿಷ್ಟು ಕಲ್ಲಿದ್ದಲು ತಂದು ಹಾವುಗಳು ಬರುವ ಜಾಗದಲ್ಲಿ ಇಟ್ಟಿದ್ದಾನೆ. ಕಲ್ಲಿದ್ದಲಿನಿಂದ ಬರುವ ಹೊಗೆಗೆ ಹಾವುಗಳು ಹತ್ತಿರ ಸುಳಿಯಲಾರವು ಎಂದು ಈತ ಪ್ಲ್ಯಾನ್ ಮಾಡಿದ್ದ. ಆದರೆ ಈತನ ಗ್ರಹಚಾರಕ್ಕೆ ಬೆಂಕಿಯು ಈತನ ಬಂಗಲೆಯ ಕರ್ಟನ್ ಗೆ ಹರಡಿ ಬಳಿಕ ಪೀಠೋಪಕರಣಗಳಿಗೆ ವ್ಯಾಪಿಸಿದೆ.
ಪರಿಣಾಮ 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆ ಸುಟ್ಟು ಕರಕಲಾಗಿದೆ. ರಕ್ಷಣಾ ಸಿಬ್ಬಂದಿ ಬರುವ ವೇಳೆಗಾಗಲೇ ಇಡೀ ಬಂಗಲೆ ಸುಟ್ಟು ಭಸ್ಮವಾಗಿದೆ. ಇದೀಗ ಬಂಗಲೆ ಸುಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.