ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಇಬ್ಬರು ಶಿಕ್ಷಕರ ವಿರುದ್ಧ 15 ವಿದ್ಯಾರ್ಥಿನಿಯರಿಂದ ದೂರು: ಓರ್ವ ಅರೆಸ್ಟ್, ಮತ್ತೋರ್ವ ಪರಾರಿ
Sunday, December 26, 2021
ಚೆನ್ನೈ: ಸರ್ಕಾರಿ ಶಾಲೆ ಶಿಕ್ಷಕನೋರ್ವನ ವಿರುದ್ಧ 15 ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿರುವ ಬೆನ್ನಲ್ಲೇ ಪೊಲೀಸರು ಶಿಕ್ಷಕನನ್ನು ಬಂಧಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ.
ಸರಕಾರಿ ಶಾಲೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಕ್ಕಳ ರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಶಾಲೆಯ 9 ಹಾಗೂ 10ನೇ ತರಗತಿಯ 15 ವಿದ್ಯಾರ್ಥಿನಿಯರು ತಮ್ಮ ಮೇಲೆ ಇಬ್ಬರು ಶಿಕ್ಷಕರು ತಮ್ಮ ಮೇಲೆ ಎಸಗುತ್ತಿರುವ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾರೆ. ಶಾಲೆಯ ಗಣಿತ ಹಾಗೂ ಸಮಾಜ ವಿಜ್ಞಾನ ಶಿಕ್ಷಕರುಗಳ ವಿರುದ್ಧ ಈ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.
ಆರೋಪಿ ಶಿಕ್ಷಕರುಗಳು ತರಗತಿಯ ವೇಳೆ ಡಬ್ಬಲ್ ಮೀನಿಂಗ್ ಬಳಸುವುದು, ಅನುಚಿತವಾಗಿ ಸ್ಪರ್ಶಿಸುವುದು ಹಾಗೂ ಶಾಲೆಯಿಲ್ಲದ ವೇಳೆಯಲ್ಲೂ ಫೋನ್ ಕರೆಗಳನ್ನು ಮಾಡುತ್ತಾರೆಂದು ಸೇರಿ ಅನೇಕ ಆರೋಪಗಳನ್ನು ಮಾಡಿದ್ದಾರೆ. ವಿದ್ಯಾರ್ಥಿನಿಯರು ನೀಡಿರುವ ದೂರಿನನ್ವಯ ಪೊಲೀಸರು ಸಮಾಜ ವಿಜ್ಞಾನ ಶಿಕ್ಷಕನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಗಣಿತ ಶಿಕ್ಷಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜಿಲ್ಲಾ ಶಿಕ್ಷಣ ಅಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.