ಮಂಗಳೂರು: ಎಂಜಿಆರ್ ಗ್ರೂಪ್ ನಿಂದ ಅಶಕ್ತರಿಗೆ 1.50 ಕೋಟಿ ರೂ. ಪರಿಹಾರ ಚೆಕ್ ವಿತರಣೆ
Thursday, December 30, 2021
ಮಂಗಳೂರು: ಎಂಜಿಆರ್ ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರು ಇಂದು ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಅಶಕ್ತರಿಗೆ 1.50 ಕೋಟಿ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು.
ಶಿಕ್ಷಣ, ಆರೋಗ್ಯ, ಕೋವಿಡ್ ಸಂಕಷ್ಟಕ್ಕೊಳಗಾದ 635 ಮಂದಿಗೆ 10 ಸಾವಿರ ರೂ., 25 ಸಾವಿರ ರೂ., 50 ಸಾವಿರ ರೂ., 1 ಲಕ್ಷ ರೂ.ವರೆಗಿನ ವಿವಿಧ ಚೆಕ್ ಅನ್ನು ಪರಿಹಾರ ರೂಪವಾಗಿ ವಿತರಣೆ ಮಾಡಿದರು.
ಎಂಜಿಆರ್ ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರು ಮಾತನಾಡಿ, 3 ವರ್ಷಗಳ ಹಿಂದೆ ತನಗೆ 60ರ ಪ್ರಕಾಶಾಭಿನಂದನಾ ಕಾರ್ಯಕ್ರಮವನ್ನು ಇದೇ ಗೋಲ್ಡ್ ಪಿಂಚ್ ಸಿಟಿಯಲ್ಲಿ ಅದ್ಧೂರಿಯಾಗಿ ನನ್ನ ಹಿತೈಷಿಗಳು ನೆರವೇರಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರತೀ ವರ್ಷ 1 ಕೋಟಿ ರೂ., 1.50 ಕೋಟಿ ರೂ. ಎಂದು ಅಶಕ್ತರಿಗೆ ನೀಡುತ್ತಿದ್ದೇನೆ. ಕೊರೊನಾ ಕಾಲದಲ್ಲಿಯೂ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಸಂಕಷ್ಟಕ್ಕೊಳಗಾದ ಜನತೆಗೆ 2 ಕೋಟಿ ರೂ. ಪರಿಹಾರ ಕಿಟ್ ವಿತರಣೆ ಮಾಡಲಾಗಿತ್ತು. ಆ ನಡುವೆಯೂ ಕಳೆದ ಬಾರಿಯೂ ಇದೇ ರೀತಿ ಅಶಕ್ತರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ ಎಂದರು.
ಈ ಬಾರಿಯೂ ಯಾವುದೇ ಜಾತಿ-ಮತ-ಬೇಧವಿಲ್ಲದೆ, ಯಾರ ಒತ್ತಡಕ್ಕೆ ಮಣಿಯದೆ 635 ಮಂದಿ ಅಶಕ್ತರಿಗೆ 1.50 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ನನ್ನ ಪತ್ನಿ ಆಶಾ ಸಹಕಾರವೂ ಇದೆ. ಮುಂದೆ ತನ್ನ ಪುತ್ರನೂ ಇದೇ ಅಶಕ್ತರಿಗೆ ನೆರವು ನೀಡುವ ಕಾರ್ಯ ಮುಂದುವರಿಸುತ್ತಾನೆ ಎಂಬ ಭರವಸೆಯಿದೆ ಎಂದು ಕೆ.ಪ್ರಕಾಶ್ ಶೆಟ್ಟಿ ಹೇಳಿದರು.