ಮದುವೆಯಾದ 18 ದಿನಕ್ಕೆ ಪತಿ ಮನೆಯಲ್ಲಿಯೇ ದುರಂತ ಅಂತ್ಯವಾದ ಯುವತಿ: ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದ ಆರೋಪ
Wednesday, December 22, 2021
ಹಾಸನ: ನೂರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿಯೋರ್ವಳು ಮದುವೆಯಾಗಿ ಕೇವಲ 18 ದಿನಕ್ಕೇ ಪತಿಯ ಮನೆಯಲ್ಲಿ ದುರಂತ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ.
ಈ ದುರ್ಘಟನೆಯು ಹಾಸನದ ಸಲೀಂ ನಗರ ಎಂಬಲ್ಲಿ ಸಂಭವಿಸಿದೆ. ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ನಿವಾಸಿ ಫಿಜಾ ಖಾನಂ(22) ಎಂಬಾಕೆ ಮೃತ ದುರ್ದೈವಿ.
ಫಿಜಾ ಖಾನಂಳ ಹಾಸನದ ಶಾಗಿಲ್ ಅಹ್ಮದ್ ಎಂಬಾತನೊಂದಿಗೆ ಮದುವೆ ಡಿಸೆಂಬರ್ 2ರಂದು ನೆರವೇರಿತ್ತು. ಮಗಳು - ಅಳಿಯ ಚೆನ್ನಾಗಿದ್ದಾರೆ ಅಂದುಕೊಂಡಿದ್ದ ಫಿಜಾ ಖಾನಂ ಪೋಷಕರಿಗೆ ಡಿ.19ರಂದು ಆಕೆಯ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು.
ಇದೀಗ ಪುತ್ರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಫಿಜಾ ಖಾನಂ ಪೋಷಕರು ಅಳಿಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪುತ್ರಿಯ ಪತಿ ಮನೆಯವರು ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ಬಾಗಿಲು ಮುಚ್ಚಿ ಕೊಲೆ ಮಾಡಿದ್ದಾರೆ. ವರದಕ್ಷಿಣೆ ತರುವಂತೆ ಕಿರುಕುಳ ಕೊಟ್ಟು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.