
22 ವರ್ಷದ ಪುತ್ರಿಯ ಸೋಗಿನಲ್ಲಿ ಕಾಲೇಜು ಸೇರಿ ಸಣ್ಣ ವಯಸ್ಸಿನ ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದ 48ರ ಮಹಿಳೆ!
Monday, December 13, 2021
ನ್ಯೂಯಾರ್ಕ್: ಅಮೆರಿಕಾದ 48 ವರ್ಷ ವಯಸ್ಸಿನ ಮಹಿಳೆಯೋರ್ವಳು 22 ವರ್ಷ ವಯೋಮಾನದ ತನ್ನ ಪುತ್ರಿಯ ಸೋಗಿನೊಂದಿಗೆ ಕಾಲೇಜು ಸೇರಿದ್ದಲ್ಲದೆ, ಸಣ್ಣ ವಯಸ್ಸಿನ ಯುವಕರೊಂದಿಗೆ ಡೇಟಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ.
2 ವರ್ಷಗಳ ಕಾಲ ತನ್ನ ಪುತ್ರಿಯ ಐಡೆಂಟಿಟಿ ಹಾಗೂ ವೇಷಗಳನ್ನು ತೊಟ್ಟುಕೊಂಡು ವಂಚನೆ ಮಾಡಿರುವುದಕ್ಕೆ ಇದೀಗ ಲೌರಾ ಓಗಲ್ಸ್ಬಿ ಎಂಬ ವಂಚಕಿ ಮಹಿಳೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ತನ್ನ ಪುತ್ರಿಯ ಐಡೆಂಟಿಟಿಯನ್ನು ಕಳವುಗೈದ ಲೌರಾ, ಪುತ್ರಿಯ ಹೆಸರಿನಲ್ಲಿ ಸೋಷಿಯಲ್ ಸೆಕ್ಯುರಿಟಿ ಕಾರ್ಡ್ಗೆ ಅರ್ಜಿ ಸಲ್ಲಿಸಿ 25 ಸಾವಿರ ಡಾಲರ್ ಅವ್ಯವಹಾರ ಮಾಡಿದ್ದಾಳೆ ಎಂದೂ ಹೇಳಲಾಗಿದೆ.
ಈಕೆ ಯೂನಿವರ್ಸಿಟಿಗೆ ಎನ್ರೋಲ್ ಮಾಡಿಕೊಂಡು, ಶಿಕ್ಷಣ ಸಾಲ, ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾಳೆ. ಅವಳನ್ನು 22 ವರ್ಷದವಳೆಂದು ನಂಬಿದ್ದ ಬಾಯ್ಫ್ರೆಂಡ್ಗಳನ್ನೂ ಲೌರಾ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗಳೊಂದಿಗೆ ವಾಸಿಸುತ್ತಿದ್ದ ಲೌರಾ, ಇದೀಗ ಏಕಾಂಗಿಯಾಗಿ ಮಿಸ್ಸೌರಿಯ ಮೌಂಟೇನ್ ವ್ಯೂ ಎಂಬ ನಗರಕ್ಕೆ ಸ್ಥಳಾಂತರಗೊಂಡಿದ್ದಳು. ಆ ಬಳಿಕ ತನ್ನ ಮಗಳೊಂದಿಗಿನ ಸಂಪರ್ಕ ಕಡಿದುಕೊಂಡಿದ್ದಳು. 2016 ರಲ್ಲಿ ತನ್ನ ಪುತ್ರಿ ಲೌರೆನ್ ಆಶ್ಲೇ ಹೇಯ್ಸ್ ಹೆಸರಿನಲ್ಲಿ ಸೋಷಿಯಲ್ ಸೆಕ್ಯುರಿಟಿ ಕಾರ್ಡ್ಗೆ ಅರ್ಜಿ ಸಲ್ಲಿಸಿದಳು. ಮಿಸ್ಸೌರಿ ಡ್ರೈವರ್ಸ್ ಲೈಸೆನ್ಸ್ ಅನ್ನೂ ಅದೇ ಹೆಸರಲ್ಲಿ ಪಡೆದಿದಳು. 2017ರಲ್ಲಿ ಪುತ್ರಿಯ ಐಡಿಯನ್ನು ಬಳಸಿಕೊಂಡು ಸೌತ್ವೆಸ್ಟ್ ಬ್ಯಾಪ್ಟಿಸ್ಟ್ ಯೂನಿವರ್ಸಿಟಿಗೆ ಪ್ರವೇಶ ಪಡೆದ ಲೌರಾ, ವಿದ್ಯಾರ್ಥಿಗಳಿಗೆ ಸಿಗುವ ಸಾಲಗಳನ್ನು, ಪುಸ್ತಕಗಳ ಗ್ರ್ಯಾಂಟ್ಗಳನ್ನು ಪಡೆದಿದ್ದಳು ಎನ್ನಲಾಗಿದೆ. ಆದರೆ, ತರಗತಿಗಳನ್ನು ಅಟೆಂಡ್ ಮಾಡುತ್ತಿದ್ದಳೇ, ಇಲ್ಲವೇ ಎಂಬುದು ಸರಿಯಾಗಿ ತಿಳಿದುಬಂದಿಲ್ಲ.
ಸ್ಥಳೀಯ ಗ್ರಂಥಾಲಯವೊಂದರಲ್ಲಿ ಕೆಲಸ ಪಡೆದಿದ್ದ ಆಕೆ ಅಲ್ಲಿನವರನ್ನು ಹಾಗೂ ಕಾಲೇಜಿನಲ್ಲಿ ತನ್ನ ನಿಜವಾದ ವಯಸ್ಸಿಗಿಂತ 26 ವರ್ಷ ಸಣ್ಣವಳೆಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದಳು. ಇದೀಗ ಲೌರಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆದ್ದರಿಂದ ಆಕೆ ಸೌತ್ವೆಸ್ಟ್ ಬಾಪ್ಟಿಸ್ಟ್ ಯೂನಿವರ್ಸಿಟಿಗೆ ಹಾಗೂ ತನ್ನ ಪುತ್ರಿ ಲೌರೆನ್ಗೆ 17,521 ಡಾಲರ್ಗಳನ್ನು ಪರಿಹಾರವಾಗಿ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಜೊತೆಗೆ, ಆಕೆಗೆ 5 ವರ್ಷ ಜೈಲು ಶಿಕ್ಷೆ ಕೂಡ ವಿಧಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.