ಅಶ್ಲೀಲವಾಗಿ ನರ್ತನ ಮಾಡಿರುವ ಸನ್ನಿ ಲಿಯೋನ್ ವೀಡಿಯೋ ಆಲ್ಬಂ ಸಾಂಗ್ ಹಿಂಪಡೆಯಲು 3ದಿನಗಳ ಕಾಲಾವಕಾಶ!
Monday, December 27, 2021
ಲಖನೌ: ನೀಲಿಚಿತ್ರಗಳ ಮಾಜಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಸೊಂಟ ಬಳುಕಿಸಿರುವ ವೀಡಿಯೋ ಆಲ್ಬಂವೊಂದನ್ನು ಸರೆಗಮ ಮ್ಯೂಸಿಕ್ ಕಂಪನಿಯು ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಆ ವೀಡಿಯೋ ಆಲ್ಬಂನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು ತಕ್ಷಣ ಇದನ್ನು ಬ್ಯಾನ್ ಮಾಡುವಂತೆ ಸಾಕಷ್ಟು ಮಥುರಾ ಮೂಲದ ಅರ್ಚಕರಿಂದ ಆಗ್ರಹಗಳು ಕೇಳಿಬಂದಿತ್ತು. ಅಲ್ಲದೆ, ಸನ್ನಿ ಲಿಯೋನ್ ಅವರಿಗೂ ಎಚ್ಚರಿಕೆ ಸಂದೇಶಗಳು ಹರಿದುಬಂದಿತ್ತು. ಅದರ ಬೆನ್ನಲ್ಲೇ ಎಚ್ಚೆತ್ತ ಸರೆಗಮ ಕಂಪೆನಿ ಮುಂದಿನ ಮೂರು ದಿನಗಳಲ್ಲಿ ಹಾಡನ್ನು ಬದಲಾವಣೆ ಮಾಡುವುದಾಗಿ ಭರವಸೆ ನೀಡಿದೆ.
ಮೂಲತಃ ಮೊಹಮ್ಮದ್ ರಫಿಯವರು 1960ರ ಕೊಹಿನೂರ್ ಸಿನಿಮಾಕ್ಕಾಗಿ ಹಾಡಿದ್ದ
'ಮಧುಬನ ಮೇ ರಾಧಿಕಾ ನಾಚೇ' ಎಂಬ ಹಾಡನ್ನು ಇದೀಗ ವೀಡಿಯೋ ಆಲ್ಬಂ ಮಾಡಲಾಗಿತ್ತು. ಈ ವೀಡಿಯೋ ಆಲ್ಬಂ ಅನ್ನು ಸರೆಗಮ ಮ್ಯೂಸಿಕ್ ಬುಧವಾರವಷ್ಟೇ “ಮಧುಬನ್” ಎಂಬ ಶೀರ್ಷಿಕೆಯಿಟ್ಟು ಬಿಡುಗಡೆ ಮಾಡಿತ್ತು. ಕನಿಕಾ ಕಪೂರ್ ಹಾಯ ಅರಿಂದಮ್ ಚಕ್ರವರ್ತಿ ಕಂಠದಲ್ಲಿ ಮೂಡಿ ಬಂದ ಈ ಆಲ್ಬಂ ಸಾಂಗ್ನಲ್ಲಿ ಸನ್ನಿ ಲಿಯೋನ್ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ. ಈ ಹಾಡು ಕೃಷ್ಣ ಮತ್ತು ರಾಧೆಯರ ನಡುವಣ ಪ್ರೇಮದ ವಿಚಾರದ ಮೇಲೆ ರಚನೆಯಾಗಿತ್ತು. ಇದೀಗ ಈ ಹಾಡಿಗೆ ಸನ್ನಿ ಲಿಯೋನ್ ಮಾದಕವಾಗಿ ಸೊಂಟ ಬಳುಕಿಸಿರೋದರಿಂದ ಎಲ್ಲೆಡೆ ಆಕ್ರೋಶ ಕೇಳಿಬಂದಿತ್ತು.
ತಕ್ಷಣ ಈ ವಿಡಿಯೋ ಸಾಂಗ್ ಅನ್ನು ಬ್ಯಾನ್ ಮಾಡಬೇಕೆಂದು ಉತ್ತರ ಪ್ರದೇಶದ ಮಥುರಾ ಅರ್ಚಕರು ಒತ್ತಾಯಿಸಿದ್ದರು. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಬೃಂದಾವನದ ಸಂತ ನಾವಲ್ ಗಿರಿ ಮಹಾರಾಜ್ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಸನ್ನಿ ಲಿಯೋನ್, ದೃಶ್ಯವನ್ನು ಹಿಂಪಡೆದು ಸಾರ್ವಜನಿಕರ ಕ್ಷಮೆಯಾಚಿಸದಿದ್ದರೆ, ಆಕೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದರು. ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಕೂಡ ಸನ್ನಿ ಲಿಯೋನ್ ಡಾನ್ಸ್ ವಿಡಿಯೋ ವಿರುದ್ಧ ಕಿಡಿಕಾರಿದ್ದರು. ಅವಹೇಳನಕಾರಿ ರೀತಿಯಲ್ಲಿ ಹಾಡನ್ನು ಪ್ರಸ್ತುತಪಡಿಸುವ ಮೂಲಕ ಬ್ರಿಜ್ಭೂಮಿಯ ಪ್ರತಿಷ್ಠೆಯನ್ನು ಕೆಡಿಸಿದ್ದಾರೆ ಎಂದಿದ್ದರು.
ಮಧ್ಯಪ್ರದೇಶದ ಗೃಹಸಚಿವ ನಾರೋತ್ತಮ್ ಮಿಶ್ರಾ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಕ್ಷಣ ವೀಡಿಯೋವನ್ನು ತೆಗೆದು ಹಾಕಲು ಸನ್ನಿ ಲಿಯೋನ್ಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ಹಲವರು ನಿರಂತರವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಾರೆ. ರಾಧೆಗೆ ದೇವಾಲಯಗಳಿವೆ. ನಾವು ಆಕೆಯನ್ನು ಪ್ರಾರ್ಥಿಸುತ್ತೇವೆ. ಮೂರು ದಿನಗಳಲ್ಲಿ ವಿಡಿಯೋ ತೆಗೆಯದಿದ್ದರೆ ನಾನು ಕಾನೂನು ಸಲಹೆ ಮತ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೀಡಿಯೋವನ್ನು ತೆಗೆಯುವುದಾಗಿ ಸರೆಗಮ ಕಂಪನಿ ಸ್ಪಷ್ಟನೆ ನೀಡಿದೆ. ನಮ್ಮ ದೇಶದ ಜನತೆಯ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಮಧುಬನ್ ಹಾಡಿನ ಸಾಹಿತ್ಯ ಹಾಯ ಹೆಸರನ್ನು ಬದಲಾಯಿಸುತ್ತೇವೆ. ಮುಂದಿನ ಮೂರು ದಿನಗಳಲ್ಲಿ ಬದಲಾದ ಹೊಸ ವಿಡಿಯೋ ಸಾಂಗ್ ಆನ್ಲೈನ್ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸರೆಗಮ ಮ್ಯೂಸಿಕ್ ಕಂಪನಿ ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿದೆ.