ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಗುಟ್ಟು ಬಯಲಾಗುತ್ತದೆಂದು 50 ವರ್ಷದ ನೆರೆಮನೆಯಾತನೇ ಕೊಲೆಗೈದನೇ?
Saturday, December 18, 2021
ಮಂಡ್ಯ: ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ .ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ. ಪ್ರಕರಣದ ಬಗ್ಗೆ ಅತ್ಯಾಚಾರ ಹಾಗೂ ಕೊಲೆ ಆರೋಪ ಕೇಳಿಬಂದಿದೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದ 14 ವರ್ಷದ ಬಾಲಕಿಗೆ 2 ವಾರಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದ
ಹಿನ್ನೆಲೆಯಲ್ಲಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಬಾಲಕಿ ಗರ್ಭಿಣಿಯಾಗಿದ್ದಾಳೆಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಅಪ್ರಾಪ್ತ ಮಗಳು ಗರ್ಭಿಣಿಯಾಗಿರುವ ವಿಚಾರ ತಿಳಿದು ಆಸ್ಪತ್ರೆಯಲ್ಲೇ ತಾಯಿ ಕುಸಿದು ಬಿದ್ದಿದ್ದಾಳೆ. ಈ ಸಂದರ್ಭ ತನ್ನ ಮೇಲಾಗುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ ತಾಯಿಯ ಬಳಿ ತಿಳಿಸಿದ್ದಳಂತೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಪಕ್ಕದ ಮನೆಯ 50 ವರ್ಷದ ಪರಮೇಶ್ ಎಂದು ತಾಯಿಯ ಬಳಿ ಬಾಲಕಿ ಬಾಯ್ಬಿಟ್ಟಿದ್ದಳು. ಆದರೆ, ಮರ್ಯಾದೆಗೆ ಅಂಜಿ ಬಾಲಕಿಯ ತಾಯಿ ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ.
ಗ್ರಾಪಂನಲ್ಲಿ ಕೆಲಸ ಮಾಡುತ್ತಿರುವ ತಾಯಿ ಎಂದಿನಂತೆ ಗುರುವಾರ ಕೆಲಸಕ್ಕೆ ಹೋಗಿದ್ದರು. ಆದರೆ ಆಕೆ ವಾಪಸ್ ಸಂಜೆ ಮನೆಗೆ ಬಂದ ಸಂದರ್ಭದಲ್ಲಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಆದರೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತಳ ಪಾಲಕರು ಆರೋಪಿಸಿದ್ದಾರೆ.
ಬಾಲಕಿ ಗರ್ಭಿಣಿಯಾಗಿರುವ ವಿಚಾರ ಊರಿಗೆ ಗೊತ್ತಾದಲ್ಲಿ ತಾನು ತಪ್ಪಿತಸ್ಥ ಆಗುತ್ತೇನೆಂಬ ಎಂಬ ಭಯದಿಂದ ಬಾಲಕಿಯನ್ನು ಪರಮೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.