6ನೇ ತರಗತಿ ವಿದ್ಯಾರ್ಥಿನಿಗೆ 50 ರೂ. ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಮುಖ್ಯ ಶಿಕ್ಷಕ: ಅರೆಸ್ಟ್ ಆದ ಆರೋಪಿ ಕೆಲಸದಿಂದ ಅಮಾನತು
Friday, December 31, 2021
ತುಮಕೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಉರ್ದು ಮಾ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲೆ ಮುಖ್ಯಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ ಬಂಧಿತ ಆರೋಪಿ
ಕಳೆದ 2 ತಿಂಗಳ ಹಿಂದೆ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿಯ ನೆಪವೊಡ್ಡಿ ಮುಖ್ಯಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಕಚೇರಿಗೆ ಕರೆಸಿಕೊಂಡಿದ್ದಾನೆ. ಬಳಿಕ ಆಕೆಗೆ 50 ರೂ. ಕೊಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ನೊಂದ ವಿದ್ಯಾರ್ಥಿನಿ ಹೆತ್ತವರಲ್ಲಿ ಈ ವಿಚಾರವನ್ನು ತಿಳಿಸಿದ್ದಾಳೆ.
ವಿದ್ಯಾರ್ಥಿನಿಯ ಮಾಹಿತಿಯಂತೆ ಆಕೆಯ ಹೆತ್ತವರು ಶಿರಾ ಠಾಣೆಯಲ್ಲಿ ಡಿ.21ರಂದು ದೂರು ದಾಖಲಿಸಿದ್ದಾರೆ. ಕಳೆದ ಐದಾರು ತಿಂಗಳಿಂದ ಆರೋಪಿ ಮಹಮ್ಮದ್ ಇಕ್ಬಾಲ್ ಅವಟಿ ಶಾಲೆಯಲ್ಲಿ ಅನುಚಿತವಾಗಿ ವರ್ತಿಸಿ, ಅಶ್ಲೀಲ ರೀತಿಯಲ್ಲಿ ವಿನಾಕಾರಣ ವಿದ್ಯಾರ್ಥಿನಿಯರ ಮೈಮುಟ್ಟುತಿದ್ದ ಎಂಬ ಆರೋಪ ಕೇಳಿಬಂದಿದೆ.
ಇದೀಗ ಈ ವಿದ್ಯಾರ್ಥಿನಿಯ ಪೋಷಕರು ಶಿರಾ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮುಖ್ಯ ಶಿಕ್ಷಕನನ್ನು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತ್ತ ಮಹಮ್ಮದ್ ಇಕ್ಬಾಲ್ ಅವಟಿ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದ್ದಂತೆ ಆತನನ್ನು ಕೆಲಸದಿಂದ ಅಮಾನತು ಮಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಡಿಡಿಪಿಐ ಕೃಷ್ಣಮೂರ್ತಿ ಆದೇಶಿಸಿದ್ದಾರೆ.