
ಸೌಂದರ್ಯವರ್ಧಕ ವ್ಯಾಪಾರದ ಸೋಗಿನಲ್ಲಿ ನಗ್ನ ಮಾಡಿ ಯುವತಿಯೊಂದಿಗೆ ಕೂರಿಸಿ ದರೋಡೆ: 6ಮಂದಿ ದುಷ್ಕರ್ಮಿಗಳು ವಶಕ್ಕೆ
Thursday, December 16, 2021
ಬೆಂಗಳೂರು: ಸೌಂದರ್ಯವರ್ಧಕ ಸಾಮಗ್ರಿಗಳನ್ನು ಕೊಳ್ಳುವ ನೆಪವೊಡ್ಡಿ ಮನೆಗೆ ಬಂದ ದುಷ್ಕರ್ಮಿಗಳು ಮನೆಯೊಡೆಯನನ್ನೇ ನಗ್ನವಾಗಿಸಿ ಯುವತಿಯೊಂದಿಗೆ ಕೂರಿಸಿದ್ದಲ್ಲದೆ, ವೀಡಿಯೋ ಮಾಡಿ ಹನಿಟ್ರ್ಯಾಪ್ ಮಾಡಿ ದರೋಡೆಗೈದಿರುವ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅನಿತಾ, ದೀಪಾ, ವಿಜಯ್, ನವೀನ್, ಮಹಾಲಿಂಗಯ್ಯ, ಚಂದ್ರಶೇಖರ್ ಹನಿಟ್ರ್ಯಾಪ್ ಮಾಡಿರುವ ದುಷ್ಕರ್ಮಿಗಳು. ಬಂಧಿತರಿಂದ 9.5 ಲಕ್ಷ ರೂ. ಚಿನ್ನಾಭರಣ, ಒಂದು ಬೈಕ್, 63 ಸಾವಿರ ರೂ. ನಗದು, ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಸ್ತ್ರ ಹಾಗೂ ಸೌಂದರ್ಯ ವರ್ಧಕಗಳ ವ್ಯಾಪಾರ ಮಾಡುತ್ತಿದ್ದ ಬಸವೇಶ್ವರನಗರ ನಿವಾಸಿ ಅಂಜು ಜೇಸ್ವಾನಿ ಎಂಬವರ ಮನೆಗೆ ನುಗ್ಗಿ ಈ ಗ್ಯಾಂಗ್ ಹನಿಟ್ರ್ಯಾಪ್ ಮಾಡಿ ದರೋಡೆಗೈದಿತ್ತು. ವ್ಯಾಪಾರದ ಸೋಗಿನಲ್ಲಿ ಆರೋಪಿಗಳು ಮನೆಗೆ ಬಂದಿದ್ದಾರೆ. ಬಳಿಕ ಈ ಗ್ಯಾಂಗ್ ಬೆದರಿಕೆಯೊಡ್ಡಿ ದರೋಡೆ ಮಾಡಿಕೊಂಡು ಹೋಗಿತ್ತು.
ಅಂಜು ಅವರ ಮನೆಗೆ ಸೌಂದರ್ಯ ವರ್ಧಕಗಳ ಖರೀದಿಗೆಂದು ದೀಪಾ ಎಂಬ ಆರೋಪಿತೆ ಮೊದಲಿಗೆ ಬಂದಿದ್ದಳು. ಅವಳ ಹಿಂದೆಯೇ ಮತ್ತೋರ್ವ ವ್ಯಕ್ತಿ ಬಂದಿದ್ದಾನೆ. ಆತನ ಬೆನ್ನಿಗೆ ಉಳಿದ ಆರೋಪಿಗಳು ಬಂದಿದ್ದರು. ಆ ಬಳಿಕ ಎಲ್ಲರೂ ಸೇರಿ ಅಂಜುರನ್ನು ನಗ್ನರನ್ನಾಗಿಸಿ ಮಾಡಿ ದೀಪಾಳೊಂದಿಗೆ ಕೂರಿಸಿ ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ವೇಶ್ಯಾವಾಟಿಕೆ ನಡೆಸುತ್ತಿದ್ದೀರೆಂದು ಸುದ್ದಿ ಹಬ್ಬಿಸುತ್ತೇವೆ ಎಂದು ಮನೆಯವರನ್ನು ಬೆದರಿಸಿತ್ತು.
ಆ ಬಳಿಕ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದೆ. ಕೊಡಲು ನಿರಾಕರಿಸಿದಾಗ, ನಾವು ಸಂಘಟನೆಯವರು, ಹಣ ಕೊಡದಿದ್ದರೆ ಪೊಲೀಸರನ್ನು ಕರೆಸಿ ನಿನ್ನ ಬಣ್ಣ ಬಯಲು ಮಾಡುವುದಾಗಿ ಬೆದರಿಸಿದ್ದಾರೆ. ಹಣ ಕೊಡದಿದ್ದಾಗ ಅಂಜು ಫೋನ್ನಿಂದ ಫೋನ್ ಪೇ ಮೂಲಕ ತಮ್ಮ ನಂಬರ್ಗೆ 63 ಸಾವಿರ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಜೊತೆಗೆ ಮನೆಯಲ್ಲಿದ 152 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ಫೋನ್ ಗಳನ್ನು ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಭಾನುವಾರ ಮಧ್ಯಾಹ್ನ ಬಸವೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಾರ್ಯಾಚರಣೆಗಿಳಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಆರೋಪಿ ಜತೆ ದೂರುದಾರರಿಗೆ ಸಂಪರ್ಕವಿತ್ತು. ಹೀಗಾಗಿ ಆರೋಪಿಗಳು ಸೀದಾ ಮನೆಗೆ ಬಂದಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.