ಮಂಗಳೂರಿನಲ್ಲಿ ಅಮಾನವೀಯ ಕೃತ್ಯ ಮೆರೆದಿದ್ದ 6 ಮಂದಿ ಅರೆಸ್ಟ್- ಮೊಬೈಲ್ ಕದ್ದನೆಂದು ಆರೋಪ ಮಾಡಿ ಉಲ್ಟಾ ನೇತು ಹಾಕಿದ್ದ ಕಟುಕರು!
ಮಂಗಳೂರು: ಮೊಬೈಲ್ ಕದ್ದಿರುವ ಆರೋಪ ಮಾಡಿ ಜೊತೆಗಾರ ಮೀನುಗಾರನನ್ನು
ಕಾಲಿಗೆ ಹಗ್ಗ ಕಟ್ಟಿ ನೇತು ಹಾಕಿ ಹಲ್ಲೆ ನಡೆಸಿದ ಆರು ಮಂದಿ ಕಟುಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊಂಡೂರು ಪೋಲಯ್ಯ
(23), ಅವುಲ ರಾಜ್ ಕುಮಾರ್ (26), ಕರಪಿಂಗಾರ ರವಿ (27), ಪುಲಯಕಾವೇರಿ ಗೋವಿಂದಯ್ಯ (47) ಪ್ರಕಾಶಂ
ಜಿಲ್ಲೆಯ ಕಾಟಂಗರಿ ಮನೋಹರ್ (21), ವೂಟುಕೋರಿ ಜಾಲಯ್ಯ( 30) ಬಂಧಿತರು.
ಘಟನೆಯ ವಿವರ: ಡಿಸೆಂಬರ್ 15 ರಂದು ಈ ಏಳು ಮಂದಿ ಆಂಧ್ರಪ್ರದೇಶದ ಮೂಲದ
ಮೀನುಗಾರರು ಮೀನುಗಾರಿಕೆಗೆ ತೆರಳಬೇಕಿತ್ತು. ಇದಕ್ಕಾಗಿ ಇದರ ಮೊದಲ ದಿನ ಡಿಸೆಂಬರ್ 14 ರಂದು ಸಣ್ಣ
ಪಾರ್ಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಲ್ಲಿ ಓರ್ವನ ಮೊಬೈಲ್ ಕಳವಾಗಿತ್ತು. ಈ ಮೊಬೈಲನ್ನು
ತಮ್ಮ ಜೊತೆಗಿದ್ದ ಆಂಧ್ರಪ್ರದೇಶ ಮೂಲದ ಮೀನುಗಾರ ವೈಲ ಶೀನು ಎಂಬಾತ ಕದ್ದಿದ್ದಾನೆ ಎಂಬ ಶಂಕೆಯಲ್ಲಿ ಈ ಆರು
ಮಂದಿ ಹಲ್ಲೆ ನಡೆಸಿದ್ದರು. ಆತನ ಕಾಲನ್ನು ಕಟ್ಟಿ ಹಾಕಿ ಬಲೆ ತಲೆಕೆಳಗು ಮಾಡಿ ಉಲ್ಟಾ ನೇತು ಹಾಕಿ
ಹಲ್ಲೆ ಮಾಡಲಾಗಿತ್ತು. ಈ ಘಟನೆಯ ಬಳಿಕ ಹಲ್ಲೆಗೊಳಗಾದ ವೈಲ ಶೀನು ಕಾರವಾರಕ್ಕೆ ಹೋಗಿದ್ದರೆ ,ಬಂಧನದ
ಭೀತಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಈ ಘಟನೆಯ ವಿಡಿಯೋವೊಂದು ಪೊಲೀಸರ ಕೈಸೇರಿತ್ತು. ಈ ಘಟನೆ ತಮಿಳುನಾಡಿನಲ್ಲಿ
ಆಗಿರಬಹುದೆಂದು ಮೊದಲು ಪೊಲೀಸರು ಅಂದಾಜಿಸಿದ್ದರು. ಆದರೆ ಆ ಬಳಿಕ ಇದು ಮಂಗಳೂರಿನಲ್ಲಿ ನಡೆದಿದೆ ಎಂದು
ತಿಳಿದ ಬಳಿಕ ಪೊಲೀಸರು ಸಂತ್ರಸ್ತನನ್ನು ಪತ್ತೆ ಹಚ್ಚಲು ಯಶಸ್ವಿಯಾದರು. ಬಳಿಕ ಆತ ನೀಡಿದ ದೂರಿನ ಆಧಾರದಲ್ಲಿ
ಆರು ಮಂದಿಯನ್ನು ಬಂಧಿಸಿದ್ದಾರೆ.