
ಮರು ಮದುವೆ ಆಗುವೆನೆಂದು ನಂಬಿಸಿ 60ರ ವೃದ್ಧರೊಬ್ಬರಿಗೆ ವಂಚಿಸಿ ಪರಾರಿಯಾದ ಖತರ್ನಾಕ್ ಲೇಡಿ: ವಂಚಕಿಗಾಗಿ ಹುಡುಕಾಟ ಆರಂಭ
Thursday, December 9, 2021
ಶಿವಮೊಗ್ಗ: ನಗರದ 60ರ ವಯೋಮಾನದ ವಿಧುರೊಬ್ಬರನ್ನು ಮದುವೆಯಾಗಿ ಎರಡನೆಯ ಪತ್ನಿಯಾಗುವುದಾಗಿ ನಂಬಿಸಿ ತಾಳಿ ಕಟ್ಟಿದ ಬಳಿಕ ತಾಳಿ, ಕಾಲುಂಗುರದ ಜೊತೆಗೆ ಖತರ್ನಾಕ್ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ ನಂಜುಂಡಪ್ಪ(60) ಎಂಬವರು ಬೆಂಗಳೂರು ನಿವಾಸಿ ಚಂದ್ರಿಕಾ ಎಂಬ ಖತರ್ನಾಕ್ ಲೇಡಿಯಿಂದ ಮೋಸ ಹೋದವರು.
ನಂಜುಂಡಪ್ಪನವರ ಪತ್ನಿ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ಮರು ವಿವಾಹವಾಗಲು ಮ್ಯಾಟ್ರಿಮೋನಿಯಲ್ಲಿ ಜಾಹೀರಾತು ನೀಡಿದ್ದರು. ಜಾಹಿರಾತು ನೋಡಿದ ಚಂದ್ರಿಕಾ ತಾನು ತಮ್ಮನ್ನು ವಿವಾಹವಾಗುವುದಾಗಿ ಹೇಳಿ ಶಿವಮೊಗ್ಗಕ್ಕೆ ಹೋಗಿದ್ದಾಳೆ.
ನಂಜುಂಡಪ್ಪನವರೂ ಚಂದ್ರಿಕಾಳನ್ನು ವಿವಾಹಗಲು ಒಪ್ಪಿದ್ದಾರೆ. ಆದ್ದರಿಂದ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ನ.15 ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ತಯಾರಿ ಮಾಡಲಾಗಿತ್ತು. ಮೂವರು ಮಕ್ಕಳಿರುವ ನಂಜುಂಡಪ್ಪ ಮದುವೆಗೆ ಸ್ನೇಹಿತರನ್ನೂ ಕರೆದುಕೊಂಡು ಹೋಗಿದ್ದರು. ಆದರೆ ಸದ್ಯ ಅಲ್ಲಿ ವಿಹಾಹವಾಗಲು ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ. ಆದರೆ ಅದಾಗಲೇ ಮದುವೆಗೆ ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರು, ಒಂದು ಜೊತೆ ಬೆಳ್ಳಿ ಕಾಲು ಚೈನು, ಎರಡು ಬೆಳ್ಳಿ ಕೈ ಬಳೆ, ರೇಷ್ಮೆ ಸೀರೆ ಚಂದ್ರಿಕಾಳಿಗೆ ನಂಜುಂಡಪ್ಪನವರು ನೀಡಿದ್ದರು.
ಸಿಗಂದೂರಿನಲ್ಲಿ ಮದುವೆಗೆ ಅವಕಾಶವಿಲ್ಲ ಎಂಬ ಕಾರಣಕ್ಕೆ ವಿವಾಹವಾಗುವ ಜೋಡಿ, ಸಂಬಂಧಿಕರು, ಸ್ನೇಹಿತರು ಶಿವಮೊಗ್ಗಕ್ಕೆ ತಿರುಗಿ ವಾಪಸ್ ಬಂದಿತ್ತು. ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬೈಕ್ ತರುವುದಾಗಿ ನಂಜುಂಡಪ್ಪ ಹೋದಾಗ ತನಗೆ ಹಸಿವೆಯಾಗಿದೆ ಎಂದು ಹೋಟೆಲ್‌ಗೆ ಹೋಗುತ್ತೇನೆಂದು ಹೇಳಿ ಹೋಗಿರುವ ಚಂದ್ರಿಕಾ ಒಡವೆ, ಸೀರೆ ಜತೆಗೆ ಪರಾರಿಯಾಗಿದ್ದಾಳೆ.
ಎಷ್ಟು ಹೊತ್ತಾದರೂ ಆಕೆ ಬಾರದ ಹಿನ್ನೆಲೆಯಲ್ಲಿ ತಾವು ಮೋಸ ಹೋಗಿರುವುದಾಗಿ ತಿಳಿದ ನಂಜುಂಡಪ್ಪನವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಖತರ್ನಾಕ್ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.