ದ.ಕೊರಿಯಾ ರಾಷ್ಟ್ರದ ವೀಡಿಯೋ ನೋಡಿದ, ವಿತರಿಸಿದ 7 ಮಂದಿಗೆ ಗಲ್ಲು: ಉ.ಕೊರಿಯಾದ ಕರಾಳತೆ ಬಯಲು
Friday, December 24, 2021
ಪ್ಯೊಂಗ್ಯಾಂಗ್: ದಕ್ಷಿಣ ಕೊರಿಯಾದ ವೀಡಿಯೋಗಳನ್ನು ನೋಡಿರುವ ಹಾಗೂ ಪ್ರಸರಣ ಮಾಡಿರುವುದಕ್ಕೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 7 ಮಂದಿಗೆ ಉತ್ತರ ಕೊರಿಯಾದಲ್ಲಿ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ಈ ಎಲ್ಲಾ ಮರಣ ದಂಡನೆ ಶಿಕ್ಷೆಯು ಉತ್ತರ ಕೊರಿಯಾ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಅಧ್ಯಕ್ಷತೆಯಲ್ಲಿಯೇ ಜಾರಿಯಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪ ಮಾಡಿದೆ.
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಮೂಲದ ಮಾನವ ಹಕ್ಕುಗಳ ಸಂಘಟನೆ, ಪರಿವರ್ತನಾ ನ್ಯಾಯ ಕಾರ್ಯನಿರತ ಗುಂಪೊಂದು ಉತ್ತರ ಕೊರಿಯಾವನ್ನು ತ್ಯಜಿಸಿ ಬಂದಿರುವ 683 ಮಂದಿಯ ಸಂದರ್ಶನವನ್ನು ಮಾಡಿದೆ. ಆಗ ಕಳೆದ ಆರು ವರ್ಷಗಳಲ್ಲಿ ಉ. ಕೊರಿಯಾದಲ್ಲಿ 27 ಮರಣದಂಡನೆ ಶಿಕ್ಷೆಗಳು ದಾಖಲಾಗಿವೆ. ಅದರಲ್ಲಿ ಹೆಚ್ಚಿನವು ಡ್ರಗ್ಸ್, ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಾಣಿಕೆಗೆ ಸಂಬಂಧಪಟ್ಟ ಮರಣದಂಡನೆ ಆಗಿದೆ.
ಉ.ಕೊರಿಯಾದಲ್ಲಿ ಆನ್ಲೈನ್ ನ್ಯೂಸ್ಪೇಪರ್ ನಡೆಸುತ್ತಿರುವ ದ.ಕೊರಿಯಾ ಮೂಲದ ವ್ಯಕ್ತಿಯೋರ್ವರು ಹೇಳುವಂತೆ "ದಕ್ಷಿಣ ಕೊರಿಯಾ ಸಿನಿಮಾ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಸಿಡಿ ಮತ್ತು ಯುಎಸ್ಬಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾತನನ್ನು ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆ ನೀಡಲಾಗಿದೆ. ಅಲ್ಲದೆ, ದ.ಕೊರಿಯಾ ಸಿನಿಮಾಗಳನ್ನು ನೋಡಿದ ಹಾಗೂ ಅವುಗಳನ್ನು ವಿತರಣೆ ಮಾಡಿರುವ ಆರು ಮಂದಿಯನ್ನೂ ಸಹ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.
ಈ ಪ್ರಕರಣಗಳು ಉತ್ತರ ಕೊರಿಯಾದ ಹೈಸನ್, ರಿಯಾಂಗ್‌ಗಾಂಗ್ ಪ್ರಾಂತ್ಯದಲ್ಲಿ 2012 ರಿಂದ 2014ರ ನಡುವೆ ನಡೆದಿದೆ. ಆರೋಪಿಗಳಲ್ಲಿ ಓರ್ವನನ್ನು 2015ರಲ್ಲಿ ಉತ್ತರ ಹಮ್ಗ್ಯಾಂಗ್ ಪ್ರಾಂತ್ಯದ ಚೊಂಗ್ಜಿನ್ ನಗರದಲ್ಲಿ ಗಲ್ಲಿಗೇರಿಸಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಉತ್ತರ ಕೊರಿಯಾದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹಾಕಿದ ಬಳಿಕವೂ ಇಂತಹ ಶಿಕ್ಷೆಗಳನ್ನು ರಾಜಧಾನಿ ಪ್ಯೊಂಗ್ಯಾಂಗ್ನ ರಹಸ್ಯ ಸ್ಥಳಗಳಲ್ಲಿ ಮಾಡಲಾಗುತ್ತಿದೆ. ಅಲ್ಲದೆ, ಎಲ್ಲ ಶಿಕ್ಷೆಗಳು ಸುಪ್ರೀಂ ನಾಯಕ ಕಿಂಗ್ ಜಾಂಗ್ ಉನ್ ನೇತೃತ್ವದಲ್ಲಿ ನಡೆಯುತ್ತಿತ್ತು ಎಂಬ ಆರೋಪವಿದೆ.
ಸದ್ಯ ಉತ್ತರ ಕೊರಿಯಾ ಮೇಲೆ ಅಂತಾರಾಷ್ಟ್ರೀಯ ಪರಿಶೀಲನೆ ಹೆಚ್ಚಳವಾಗುತ್ತಿದ್ದಂತೆ ಕಿಮ್ ಜಾಂಗ್ ಉನ್ ಆಡಳಿತವು ಮಾನವ ಹಕ್ಕುಗಳ ಮೇಲೆ ಹೆಚ್ಚು ಗಮನ ಹರಿಸಿದೆ ಎಂದು ಬುಧವಾರ ಪ್ರಕಟವಾಗಿರುವ ವರದಿಯ ಲೇಖಕ ಪಾರ್ಕ್ ಅಹ್ ಯಿಯೋಂಗ್ ಹೇಳಿದ್ದಾರೆ.
ಹೀಗೆಂದ ಮಾತ್ರಕ್ಕೆ ಉತ್ತರ ಕೊರಿಯಾದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದರ್ಥವಲ್ಲ. ಈಗಲೂ ಗಲ್ಲುಶಿಕ್ಷೆ ನೀಡುವ ಪ್ರಕ್ರಿಯೆ ಮುಂದುವರಿಯುತ್ತಲೇ ಇದೆ. ಆದರೆ ಅದು ಸಾರ್ವಜನಿಕವಾಗಿ ಗೋಚವಾಗುತ್ತಿಲ್ಲ ಅಷ್ಟೇ ಎಂದು ಯಿಯೋಂಗ್ ತಿಳಿಸಿದ್ದಾರೆ.