
ಝೂಮ್ ಕಾಲ್ ನಲ್ಲಿಯೇ 900 ಉದ್ಯೋಗಿಗಳನ್ನು ನೌಕರಿಯಿಂದ ತೆಗೆದ ಸಿಇಒ: ವೀಡಿಯೋ ವೈರಲ್
Tuesday, December 7, 2021
ನವದೆಹಲಿ/ನ್ಯೂಯಾರ್ಕ್: ಕೋವಿಡ್ ಸೋಂಕು ಜಗತ್ತಿಗೆ ಕಾಲಿಟ್ಟ ಬಳಿಕ ಎಲ್ಲ ವ್ಯವಹಾರಗಳೂ ಆನ್ಲೈನ್ ಹಾಗೂ ಜೂಮ್ ಕಾಲ್ನಲ್ಲೇ ನಡೆಯುತ್ತಿದೆ. ಇದೀಗ ಕಂಪೆನಿಯೊಂದರ ಸಿಇಒ ಜೂಮ್ ಕಾಲ್ನಲ್ಲೇ ತಮ್ಮ 900 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ನೋಡಿದ ನೆಟ್ಟಿಗರು ವರ್ಷಾಂತ್ಯದ ಹಾಗಯ ಕ್ರಿಸ್ಮಸ್ನ ಹಾಲಿಡೇ ಮೂಡ್ನಲ್ಲಿದ್ದ ಉದ್ಯೋಗಿಗಳಿಗೆ ಎಂಥಹ ಬಿಗ್ ಶಾಕ್ ಕೊಟ್ಟಿದ್ದಾರೆ ಎಂದು ವಿವಿಧ ರೀತಿಯ ಕಾಮೆಂಟ್ಗಳನ್ನು ನೀಡಿದ್ದಾರೆ. ಅಮೆರಿಕದ ಡಿಜಿಟಲ್ ಸರ್ವೀಸಸ್ ಕಂಪೆನಿ ಬೆಟರ್.ಕಾಮ್ಸಂಸ್ಥೆಯ ಸಿಇಒ ವಿಶಾಲ್ ಗಾರ್ಗ್ ಅವರೇ ಜೂಮ್ ಕಾಲ್ ನಲ್ಲಿಯೇ 900 ಕೆಲಸಗಾರರನ್ನು ನೌಕರಿಯಿಂದ ಕಿತ್ತು ಹಾಕಿದವರು.
"ಅಮೆರಿಕದಲ್ಲಿ ಹಾಗೂ ಭಾರತದಲ್ಲಿ ಉದ್ಯೋಗ ಮಾಡುತ್ತಿರುವ ನಮ್ಮ 900 ನೌಕರರನ್ನು ನಾವು ತಕ್ಷಣದಿಂದಲೇ ಲೇ ಆಫ್ ಮಾಡಬೇಕಾಗಿದೆ. ಈ ಜೂಮ್ ಕಾಲನ್ನು ಅಟೆಂಡ್ ಮಾಡುತ್ತಿರೋ ಎಲ್ಲಾ ನೌಕರರೂ ಕೆಲಸ ಕಳೆದುಕೊಳ್ಳುತ್ತಿರುವ ನತದೃಷ್ಟ ಗುಂಪಿಗೆ ಸೇರಿದ್ದಾರೆ" ಎಂದು ಸಿಇಒ ವಿಶಾಲ್ ಗಾರ್ಗ್ ಘೋಷಿಸಿದ್ದಾರೆ.
ಲ್ಯಾಪ್ಟಾಪ್ ನ ಸ್ಕ್ರೀನ್ ಮೇಲೆ ಸಿಇಒ ಈ ಶಾಕಿಂಗ್ ನ್ಯೂಸ್ ಕೊಡುತ್ತಿರುವುದನ್ನು ಕೆಲಸದಿಂದ ತೆಗೆಯಲ್ಪಟ್ಟ ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ಡಿ.4 ರಂದು ಉದ್ಯೋಗಿಯೊಬ್ಬರು ಪವರ್ ಆಫ್ ಬನಾನಾ ಎಂಬ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಸುಮಾರು 50 ಸಾವಿರ ಮಂದಿಯಿಂದ ವೀಕ್ಷಣೆಗೊಂಡಿರುವ ಈ ವಿಡಿಯೋಗೆ ನೂರಾರು ಮಂದಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
"ಮಾರ್ಕೆಟ್ನ ಕೆಟ್ಟ ಸ್ಥಿತಿಯ ಪರಿಣಾಮ ನಿಮ್ಮನ್ನು ಲೇ ಆಫ್ ಮಾಡಲಾಗುತ್ತಿದೆ. ಈ ಕುರಿತಾಗಿ ನಮ್ಮ ಎಚ್.ಆರ್. ಇಲಾಖೆಯಿಂದ ಸದ್ಯದಲ್ಲೇ ನಿಮಗೆ ಈ-ಮೇಲ್ ಬರಲಿದೆ. ಕೆಲಸದಿಂದ ತೆಗೆಯುತ್ತಿರುವ ಎಲ್ಲರಿಗೂ 4 ವಾರಗಳ ಸೆವೆರೆನ್ಸ್ ಭತ್ತೆ ಹಾಗೂ 1 ತಿಂಗಳ ಪೂರ್ಣ ಬೆನೆಫಿಟ್ಸ್ ನೀಡಲಾಗುವುದು" ಎಂದು ಸಿಇಒ ಗಾರ್ಗ್ ಹೇಳಿದ್ದಾರೆ. ಗಾರ್ಗ್ ಇದನ್ನು ಅನೌನ್ಸ್ ಮಾಡುತ್ತಿರುವಂತೆಯೇ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಉದ್ಯೋಗಿಯು ಬೇಸರದ ಉದ್ಗಾರ ತೆಗೆಯುವುದೂ ಹಿನ್ನೆಲೆಯಲ್ಲಿ ಕೇಳಿಬರುತ್ತದೆ.