ಪುತ್ರನ ವಿವಾಹ ಆಮಂತ್ರಣ ಪತ್ರ ನೀಡಲು ಹೋಗಿದ್ದ ಕಾಂಗ್ರೆಸ್ ಮುಖಂಡ, ಪತ್ನಿ ಅಪಘಾತಕ್ಕೆ ಬಲಿ: ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ
Thursday, December 2, 2021
ಬೀದರ್: ಪುತ್ರನ ವಿವಾಹ ಆಮಂತ್ರಣ ಪತ್ರ ನೀಡಲು ಹೋಗಿದ್ದ ಭಾಲ್ಕಿಯ ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಅವರ ಪತ್ನಿ ಭೀಕರ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಗ್ರಾಪಂ ಅಧ್ಯಕ್ಷ ಸೂರ್ಯಕಾಂತ ಪಾಟೀಲ್ (50) ಹಾಗೂ ಜಯಶ್ರೀ ಪಾಟೀಲ್ (45) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಡಿಸೆಂಬರ್ 26 ರಂದು ಅವರ ಪುತ್ರ ಸಾಯಿನಾಥ ಸೂರ್ಯಕಾಂತ ಪಾಟೀಲ್ ಮದುವೆ ನಿಗದಿಯಾಗಿತ್ತು. ಆದ್ದರಿಂದ ಬೀದರ್‌ನಲ್ಲಿರುವ ಸಂಬಂಧಿಕರಿಗೆ ಆಮಂತ್ರಣ ಪತ್ರ ನೀಡಲು ಹೋಗಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಬುಧವಾರ ಮಧ್ಯರಾತ್ರಿ ಕಾರು ಅಪಘಾತವಾಗಿದೆ.
ಬೀದರ್ ನ ಭಾಲ್ಕಿಯ ಸೇವಾಲಾಲ ತಾಂಡದ ಬಳಿ ಕಾರು ಅಪಘಾತದಲ್ಲಿ ಪಲ್ಟಿಯಾಗಿದೆ. ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃಪಟ್ಟಿದ್ದಾರೆ. ತಡ ರಾತ್ರಿಯಾದರೂ ಹೆತ್ತವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಹಾಗೂ ಅವರು ಫೋನ್ ಸಂಪರ್ಕಕ್ಕೆ ಸಿಗದಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಇಡೀ ರಾತ್ರಿ ಹುಡುಕಾಟ ನಡೆಸಿದ್ದಾರೆ.
ಬಹಳ ಹುಡುಕಾಟ ನಡೆಸಿದ ಬಳಿಕ ಇಂದು ನಸುಕಿನ ವೇಳೆ ಸೇವಾಲಾಲ ತಾಂಡದ ಬಳಿ ದಂಪತಿ ಅಪಘಾತಗೊಂಡ ಕಾರು ಹಹಿತ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಈಶ್ವರ ಖಂಡ್ರೆ ಹಾಗೂ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆ ಸಂಭ್ರಮದ ಸಂತೋಷದಲ್ಲಿದ್ದ ಮನೆಯಲ್ಲೀಗ ಆಕ್ರಂದ ಮುಗಿಲುಮುಟ್ಟಿದೆ.