ಸ್ನೇಹಿತನ ಪ್ಲ್ಯಾಟಿಗೆ ಬಂದಿದ್ದ ಕಿರಿಯ ಕಲಾವಿದೆಯರು ರಾತ್ರಿ ನಶೆಯಲ್ಲಿ ತೇಲಾಡಿದ್ದರು: ಬೆನ್ನಲ್ಲೇ ನಡೆಯಿತು ಭಾರೀ ದುರಂತ
Sunday, December 19, 2021
ಹೈದರಾಬಾದ್: ನಗರದ ಗಾಚಿಬೌಲಿಯಲ್ಲಿ ಡಿ.18ರ ನಸುಕಿನ ಜಾವ 3.30ರ ಸುಮಾರಿಗೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಿರಿಯ ಕಲಾವಿದೆಯರು ಹಾಗೂ ಓರ್ವ ಬ್ಯಾಂಕ್ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದ ಭೀಕರತೆಗೆ ಕಿರಿಯ ಕಲಾವಿದೆಯರಾದ ಮಾನಸ ಎಂ (21) ಹಾಗೂ ಮಾನಸ ಎನ್ (23) ಮತ್ತು ಬ್ಯಾಂಕ್ ಉದ್ಯೋಗಿ ಅಬ್ದುಲ್ ರಹೀಂ(25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿಸಿಧು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ಸಾಯಿ ಸಿಧು ಕೂಡಾ ಸೀರಿಯಲ್ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ. ಈತ ಗಾಚಿಬೌಲಿಯ ಜೆ.ವಿ. ಕಾಲನಿ ನಿವಾಸಿಯಾಗಿದ್ದ. ಅಬ್ದುಲ್ ರಹೀಮ್ ವಿಜಯವಾಡ ಮೂಲದವನಾಗಿದ್ದು, ಮಧಪುರ್ನ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಉದ್ಯೋಗಿ ಆಗಿದ್ದ. ಮಾನಸ ಎಂ ಹಾಗೂ ಮಾನಸ ಎನ್ ಅಮರಪೇಟೆಯ ಹಾಸ್ಟೆಲ್ನಲ್ಲಿ ವಾಸವಿದ್ದರು. ಇಬ್ಬರು ಟಿವಿ ಸೀರಿಯಲ್ನಲ್ಲಿ ಕಿರಿಯ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಮಾನಸ ಎನ್ ಬೆಂಗಳೂರು ಮೂಲದವಳಾಗಿದ್ದಳು. ಅವಳ ತಂದೆ ಸಿ.ಎಂ. ನಾರಾಯಣಮೂರ್ತಿ ಓರ್ವ ರಾಜಕಾರಣಿ. ಮೂರು ದಿನಗಳ ಹಿಂದೆಯಷ್ಟೇ ಆಕೆ ಸಾಯಿಸಿಧು ಫ್ಲ್ಯಾಟ್ಗೆ ಬಂದಿದ್ದಳು. ಮಾನಸ ಎಂ ಎಂಬಾಕೆ ಸಾಯಿಸಿಧುಗೆ ಇನ್ಸ್ಟಾಗ್ರಾಂ ಮೂಲಕ ಪರಿಚಿತಳಾಗಿದ್ದಳು. ಶುಕ್ರವಾರ ಬೆಳಗ್ಗೆ ಸಿಧು ಫ್ಲ್ಯಾಟ್ಗೆ ಬಂದಿದ್ದಳು.
ಅಬ್ದುಲ್ ರಹೀಂ ಅದೇ ಫ್ಲ್ಯಾಟ್ಗೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ. ಈ ಸಂದರ್ಭ ಸಾಯಿಸಿಧು ಹೊರತುಪಡಿಸಿ ಉಳಿದ ಮೂವರು ರಾತ್ರಿ ಮದ್ಯಪಾನ ಮಾಡಿದ್ದರು. ಬಳಿಕ ಮಧ್ಯರಾತ್ರಿ ಟೀ ಕುಡಿಯಲೆಂದು ಕಾರು ತೆಗೆದುಕೊಂಡು ಹೊರ ಹೋಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಹೀಂ, ಮದ್ಯದ ಅಮಲಿನಲ್ಲಿದ್ದ. ಅವನ ಪಕ್ಕದ ಸೀಟಿನಲ್ಲಿ ಸಾಯಿ ಸಿಧು ಕುಳಿತಿದ್ದ.
ಹಿಂಬದಿ ಸೀಟಿನಲ್ಲಿ ಇಬ್ಬರೂ ಮಾನಸರು ಕುಳಿತಿದ್ದರು. ಮೊದಲೇ ಮತ್ತಿನಲ್ಲಿದ್ದ ಅಬ್ದುಲ್ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಸಾಯಿಸಿಧು ಎಷ್ಟೇ ಹೇಳಿದರೂ ಅವನ ಮಾತಿಗೆ ಕ್ಯಾರೆ ಎನ್ನದೆ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ. ರಾತ್ರಿ 2.10ರ ಸುಮಾರಿಗೆ 140 ಕಿ.ಮೀ ವೇಗದಲ್ಲಿದ್ದ ಕಾರು ಅಬ್ದುಲ್ ನಿಯಂತ್ರಣ ತಪ್ಪಿ ಹೈದರಾಬಾದ್ನ ಕೇಂದ್ರೀಯ ವಿಶ್ವವಿದ್ಯಾಲಯದ ಬಳಿಯಿರುವ ರೇಣುಕಾ ಎಲ್ಲಮ್ಮ ದೇವಸ್ಥಾನದ ಪಕ್ಕದ ಮರ ಒಂದಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಕಾರ ಎರಡು ಭಾಗವಾಗಿದೆ. ಪರಿಣಾಮ ಸ್ಥಳದಲ್ಲೇ ಮಾನಸ ದ್ವಯರು ಹಾಗೂ ಅಬ್ದುಲ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಾಯಿಸಿಧುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ವರೂ ಮಾನಸಂದಿರೂ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಹೊರಕ್ಕೆ ಹಾರಿದರೆ, ಅಬ್ದುಲ್ ರಹೀಂ ಚಾಲಕನ ಸೀಟಿನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದ. ಬಲೂನ್ ತೆರೆದುಕೊಂಡಿದ್ದರಿಂದ ಸಾಯಿ ಸಿಧು ಬದುಕುಳಿದಿದ್ದಾನೆ. ಮೃತದೇಹಗಳನ್ನು ಪೊಲೀಸರು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅಬ್ದುಲ್ ರಹೀಂ ಅಪಘಾತಗೊಂಡ ಕಾರನ್ನು ಕೆಲವೇ ದಿನಗಳ ಹಿಂದಷ್ಟೇ ಬಾಡಿಗೆ ಪಡೆದಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.