ಲಾರಿಯೆರಡರ ನಡುವೆ ಅಪಘಾತ: ಮೃತಪಟ್ಟದ್ದು ಮಾತ್ರ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ದಂಪತಿ ಹಾಗೂ ಮಗು!
Tuesday, December 21, 2021
ಗೋದಾವರಿಖನಿ (ತೆಲಂಗಾಣ): ಚಲಿಸುತ್ತಿರುವ ಆಟೋವೊಂದರ ಮೇಲೆ ಲಾರಿಯೊಂದು ಉರುಳಿ ಬಿದ್ದಿರುವ ಪರಿಣಾಮ ದಂಪತಿ ಜೊತೆಗೆ ಮಗುವೂ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ತೆಲಂಗಾಣದ ಗೋದಾವರಿಖನಿಯ ಗಂಗಾನಗರ ರಸ್ತೆಯ ಬಳಿ ಸಂಭವಿಸಿದೆ.
ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದೆ. ಆಗ ಲಾರಿಯೊಂದು ಅಲ್ಲಯೇ ಚಲಿಸುತ್ತಿದ್ದ ಆಟೋದ ಮೇಲೆಯೇ ಬಿದ್ದಿದೆ ಪರಿಣಾಮ ಮಗು ಸೇರಿದಂತೆ ರಾಮಗುಂಡ ನಿವಾಸಿ ಶೇಖ್ ಶೇಕಿಲ್ ಹಾಗೂ ಅವರ ಪತ್ನಿ ರೇಷ್ಮಾ ಮೃತಪಟ್ಟಿದ್ದಾರೆ.
ದಂಪತಿ ತಮ್ಮ ಇಬ್ಬರು ಮಕ್ಕಳು ಹಾಗೂ ಇನ್ನಿಬ್ಬರೊಂದಿಗೆ ಮಂಚಿರ್ಯಾಲಾ ಜಿಲ್ಲೆಯ ಇಂದರಾಂ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಫ್ಲೈಓವರ್ ಬಳಿ ಕಲ್ಲಿದ್ದಲು ತುಂಬಿಕೊಂಡು ಲಾರಿಯೊಂದು ಬರುತ್ತಿದ್ದರೆ, ಇನ್ನೊಂದೆಡೆಯಿಂದ ಮಣ್ಣು ತುಂಬಿಕೊಂಡು ಮತ್ತೊಂದು ಲಾರಿ ಬರುತ್ತಿತ್ತು. ಇವೆರಡರ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಪೈಕಿ ಒಂದು ಲಾರಿ ಅಲ್ಲಿಯೇ ಕೆಳಕ್ಕೆ ಪ್ರಯಾಣಿಸುತ್ತಿದ್ದ ಆಟೋದ ಮೇಲೆಯೇ ಬಿದ್ದಿದೆ.
ಅಪಘಾತದ ರಭಸಕ್ಕೆ ಆಟೋದಲ್ಲಿದ್ದ ದಂಪತಿ ಹಾಗೂ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೊಂದು ಎರಡು ತಿಂಗಳ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.